ನೂತನ ಕುಲಪತಿಗೆ ಕಸಾಪ ಸನ್ಮಾನ

ತುಮಕೂರು, ಜು. ೨೬- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಸದಸ್ಯ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ನವರ ನೇತೃತ್ವದಲ್ಲಿ ತುಮಕೂರು ವಿ.ವಿ.ಗೆ ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿರುವ ಪ್ರೊ. ವೆಂಕಟೇಶ್ವರಲು ರವರನ್ನು ಭೇಟಿಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕನ್ನಡ ಪರ ಕಾರ್ಯಕ್ರಮಗಳನ್ನು ಮಾಡಲು ವಿ.ವಿ.ಯ ಸಹಕಾರ ಕೋರಿದ್ದಲ್ಲದೆ ಸಂಶೋಧನಾ ಕಮ್ಮಟ, ವಿಚಾರ ಸಂಕಿರಣ, ತುಮಕೂರು ಜಿಲ್ಲೆಯ ಕಲೆ ಮತ್ತು ಸಂಸ್ಕೃತಿ ಚಿಂತನಾ ಕಾರ್ಯಕ್ರಮಗಳನ್ನು ತುಮಕೂರು ವಿ.ವಿ. ಸಹಕಾರದೊಂದಿಗೆ ನಡೆಸಲು ನೂತನ ಕುಲಪತಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕುಲಪತಿಗಳಾದ ವೆಂಕಟೇಶ್ವರಲು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಿಗೆ ವಿ.ವಿ.ಯ ಎಲ್ಲ ವಿಭಾಗಗಳು ಸಹಕಾರ ನೀಡಿ ಜಂಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಒಂದು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಆ ಪ್ರಕಾರ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ, ಸಂಚಾಲಕ ಜಿ.ಹೆಚ್.ಮಹದೇವಪ್ಪ, ಸಲಹಾ ಸಮಿತಿ ಸಂಚಾಲಕ ಕೆ.ಎಸ್.ಉಮಾಮಹೇಶ್, ಪದಾಧಿಕಾರಿಗಳಾದ ರಮೇಶ್, ನಟರಾಜ್, ಸತೀಶ್ ಹೆಬ್ಬಾಕ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಅಜಯ್ ಮತ್ತಿತರರು ಉಪಸ್ಥಿತರಿದ್ದರು.