ಗದಗ, ಮಾ 28 : ಸರಕಾರವು ಜನರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜಿಲ್ಲೆಯ ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸುತ್ತಿರುವ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದು ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿದ್ದಪ್ಪ ಪಲ್ಲೇದ ನುಡಿದರು.
ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಜರುಗಿದ ಜಿಲ್ಲೆಯ ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು. ಸರಾಕರವು ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಇಂದು ವಿತರಿಸಲಾಗುತ್ತಿರುವ ಹಕ್ಕು ಪತ್ರಗಳಿಂದ ಸರಕಾರದ ಸೌಲಭ್ಯಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು. ಮೂಲಭೂತ ಸೌಲಭ್ಯಗಳಿಂದ ವಂಚಿತವಾದಂತಹ ಗ್ರಾಮಗಳನ್ನು ಸರಕಾರವು ಗುರುತಿಸಿ ಅಂತಹ ಗ್ರಾಮಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಸರಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಪಡೆದುಕೊಳ್ಳಲು ಮುಂದಾಗುವಂತೆ ಶಿದ್ದಪ್ಪ ಪಲ್ಲೇದ ಹೇಳಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮಾತನಾಡಿ ರಾಜ್ಯದ ಕೆಲವು ಗ್ರಾಮಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕು ಪತ್ರ ಅಥವಾ ಅಗತ್ಯದ ದಾಖಲೆಗಳು ಇರಲಿಲ್ಲ. ಇಂತಹ ಗ್ರಾಮಗಳನ್ನು ಸರಕಾರವು ಗುರುತಿಸಿ ನೂತನ ಕಂದಾಯ ಗ್ರಾಮಗಳನ್ನಾಗಿಸಿ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಂಡಿದೆ ಎಂದರು. ಜಿಲ್ಲೆಯಲ್ಲಿ ಮೂವತ್ತೊಂದು ಗ್ರಾಮಗಳ ಪೈಕಿ ಮೂವತ್ತು ಗ್ರಾಮದ 2111 ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿಯೂ ಸಹ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಜರಗುತ್ತಿದ್ದು ಅನೇಕ ವರ್ಷಗಳಿಂದ ದಾಖಲೆಗಳು ಇಲ್ಲದೆ ವಾಸಿಸುತ್ತಿರುವವರನ್ನು ಗುರುತಿಸಿ ಹಕ್ಕು ಪತ್ರ ವಿತರಿಸುವ ಕಾರ್ಯವಾಗುತ್ತಿದೆ. ಹಕ್ಕು ಪತ್ರ ಪಡೆದಂತಹ ಫಲಾನುಭವಿಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಗದಗ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ. ಸ್ವಾಗತಿಸಿದರು. ಕು. ಮಂಜರಿ ಹೊಂಬಾಳಿ ಕಾರ್ಯಕ್ರಮ ನಿರೂಪಿಸಿದರು.