ನೂತನ ಅಶ್ವಥ್‌ಕಟ್ಟೆ ಉದ್ಘಾಟನೆ

ಕೋಲಾರ,ಡಿ.೨:ಕೋಲಾರ ಗಾಂಧಿನಗರದಲ್ಲಿರುವ ಪುರಾತನ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ, ನೂತನವಾಗಿ ನಿರ್ಮಿಸಿದ ಅಶ್ವಥಕಟ್ಟೆಯ ಉದ್ಘಾಟನೆ ಕಾರ್ಯಕ್ರಮವನ್ನ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರ, ಪಂಚಾಭಿಷೇಕ ಹಾಗೂ ಪ್ರಸಾದ ವಿನಿಯೋಗವನ್ನು ಮಾಡಲಾಯಿತು.
ಶಿವಾರಪಟ್ಟಣದಲ್ಲಿ ಕೆತ್ತನೆ ಮಾಡಲಾದಂತಹ ದೇವರುಗಳ ವಿಗ್ರಹಗಳನ್ನು ಗಾಂಧಿನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪುರೋಹಿತರಾದ ಕೆ.ಎನ್.ಬಾಲಚಂದ್ರಶಾಸ್ತ್ರಿ ಹಾಗೂ ತಂಡದವರಿಂದ ಗಣಪತಿ ನವಗ್ರಹೋಮ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ ಮತ್ತು ಹವನಗಳ ಮೂಲಕ ವಿಗ್ರಹಗಳನ್ನು, ಗೋಪುರ ಕಳಶವನ್ನು ಪ್ರತಿಷ್ಟಾಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೇಲ್ವಿಚಾರಕ ಹೆಚ್.ಬಿ ಗೋಪಾಲ್, ಎರಡು ದಿನಗಳ ಕಾಲ ನಡೆದಂತಹ ದೇವತಾ ಕಾರ್ಯಗಳಿಗೆ ಹಾಗೂ ಅಶ್ವಥಕಟ್ಟೆ ನಿರ್ಮಾಣ ಕಾರ್ಯಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಲ್ಲಾ ರಿತಿಯ ಸಹಕಾರ ಹಾಗೂ ಬೆಂಬಲವನ್ನು ನೀಡಿದ ಸಮಸ್ತ ಬಡಾವಣೆಯ ಭಕ್ತಾಧಿಗಳಿಗೆ ಹಾಗೂ ದಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಮುಂದಿನ ದಿನಗಳಲ್ಲಿ ಶ್ರೀ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ, ರಾಜಗೋಪುರ ನಿರ್ಮಾಣ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದ್ದು, ಇವುಗಳಿಗೆ ಆಸಕ್ತ ಭಕ್ತಾಧಿಗಳು ತನು, ಮನು, ಧನ ಎಲ್ಲಾ ರೀತಿಯ ಸಹಕಾರವನ್ನು ನೀಡಿ ದೇವರ ಕೃಪೆಗೆ ಪಾತ್ರರಾಗುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಬಾಲಾಜಿ ಹನುಮಪ್ಪ, ಸ್ಟಾರ್ ಮುನಿಯಪ್ಪ, ಗಾಜುಲು ವೆಂಕಟರವಣಪ್ಪ, ಗುರುಸ್ವಾಮಿ, ಶಾಂತಮ್ಮ, ಬಾಲಕುಮಾರ್, ಮೇಸ್ತ್ರಿ ಮುನಿರಾಜು, ಮೇಸ್ತ್ರಿ ಹನುಮಂತು, ಮೇಸ್ತ್ರಿ ದಾಸಪ್ಪ, ಪಿಳ್ಳ, ಪೆರುಮಾಳ್, ಗೌಡರ ರಾಮಪ್ಪ, ಗೌಡರ ನಾರಾಯಣಸ್ವಾಮಿ, ಕೆ.ಎಸ್.ಆರ್.ಟಿ.ಸಿ ವೆಂಕಟೇಶ್, ಹನುಮಪ್ಪ, ಕೋಡಿರಾಮಸಂದ್ರ ಚಂದ್ರಪ್ಪ, ಕೈವಾರ ಚಂದ್ರಾರೆಡ್ಡಿ, ಬೆಮೆಲ್ ಶ್ರೀರಾಮಣ್ಣ, ಚಿಕ್ಕಮುನಿಯಪ್ಪ ಹಾಗೂ ಊರಿನ ಭಕ್ತಾಧಿಗಳು ಹಾಗೂ ನಾಗರೀಕರು ಭಾಗವಹಿಸಿದ್ದರು.