
ರಾಮನಗರ,ಸೆ.೭-ಹನ್ನೆರಡನೇ ಶತಮಾನದಲ್ಲಿ ಕಾಯಕಕ್ಕೆ ಒತ್ತು ನೀಡುವ ಮೂಲಕ ಜನ ಸಮುದಾಯದಲ್ಲಿ ಕಾಯಕದ ಮಹತ್ವವನ್ನು ಸಾರಿದ ನುಲಿಯ ಚಂದಯ್ಯನವರ ಆದರ್ಶ ಬದುಕು ಮತ್ತು ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಎ ಇಕ್ಬಾಲ್ ಹುಸೇನ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಶ್ರೀ ನುಲಿಯ ಚಂದಯ್ಯ ಅವರ ೯೧೬ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಶ್ರೀಗಳ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ನುಲಿಯ ಚಂದಯ್ಯ ಬಸವಣ್ಣನವರ ಸಮಕಾಲೀನರು ಪ್ರಮುಖ ಶರಣರಲ್ಲಿ ಒಬ್ಬರು. ಇವರು ಹುಲ್ಲನ್ನು ಕೊಯ್ದು ನಾರನ್ನು ನುಲಿದು, ಹಗ್ಗಮಾಡಿ ಅದನ್ನು ಮಾರಿ ಬಂದ ಹಣದಲ್ಲಿ ದಾಸೋಹ ಮಾಡುತ್ತಿದ್ದರು. ನುಲಿಯ ಚಂದಯ್ಯರಂತೆ ನಾವು ನಮ್ಮ ಕರ್ತವ್ಯಗಳನ್ನು ಅರಿತು ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕು. ತಾನು ಮಾಡಿದ ಕಾಯಕಕ್ಕೆ ಅನುಗುಣವಾಗಿ ದುಡಿದು ಬದುಕಬೇಕು ಎಂಬುದು ಅವರ ಧ್ಯೇಯವಾಗಿತ್ತು. ಅವರ ಆದರ್ಶ ಹಾಗೂ ಚಿಂತನೆ ಸಮಾಜದ ಎಲ್ಲ ವರ್ಗದ ಜನರು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ವಿಜಯಕುಮಾರಿ, ನಗರಸಭೆ ಉಪಾಧ್ಯಕ್ಷರಾದ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶಾಂತಿಪ್ರಿಯ, ಅಂಬೇಡ್ಕರ್ ಅಭಿವೃದ್ದಿ ನಿಗಮ ಜಿಲ್ಲಾ ವ್ಯವ್ಥಾಪಕನಿರ್ದೇಶಕರಾದ ಸರೋಜಾ ದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಸಮುದಾಯದ ಮುಖಂಡರುಗಳಾದ ಗುಡ್ಡೆ ವೆಂಕಟೇಶ್, ಶಿವಕುಮಾರ ಸ್ವಾಮಿ, ಶಿವಶಂಕರ್, ಶಿವಪ್ರಕಾಶ್, ರವೀಶ್, ಡಾ. ಗೋವಿಂದಯ್ಯ, ರಮೇಶ್, ಎಸ್.ಎಲ್.ವಿ. ವೆಂಕಟೇಶ್, ಮುನಿಶೆಟ್ಟಿ, ವಾಸು, ಸುಗುಣ ಅಶ್ವಥ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.