ನುಡಿ ಹಬ್ಬಕ್ಕೆ ಹಾವೇರಿ ಸಜ್ಜು

ಹಾವೇರಿ, ಜ. ೪: ಏಲಕ್ಕಿ ನಾಡು ಹಾವೇರಿಯಲ್ಲಿ ಕನ್ನಡ ನುಡಿ ಹಬ್ಬದ ಸಿದ್ಧತೆಗಳು ಭರದಿಂದ ನಡೆದಿವೆ. ಹಾವೇರಿಯಲ್ಲಿ ಜ. ೬ ರಿಂದ ೮ರವರೆಗೂ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಕನ್ನಡ ಅಭಿಮಾನಿಗಳು, ಸಾಹಿತ್ಯಾಸಕ್ತರು, ಸಾಹಿತಿಗಳು, ಬರಹಗಾರರು, ಲೇಖಕರು ಹಾಗೂ ಗಣ್ಯರಿಗೆ ಅಚ್ಚುಕಟ್ಟಾದ ವಸತಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.ಕನ್ನಡದ ನುಡಿ ಜಾತ್ರೆಗೆ ಕೆಲವೇ ದಿನಗಳಷ್ಟೇ ಉಳಿದಿದ್ದು, ಸಮ್ಮೇಳನಕ್ಕೆ ಆಗಮಿಸುವವರಿಗೆ ಸಿಹಿ ಊಟದ ಭೂರಿ-ಭೋಜನವನ್ನು ವ್ಯವಸ್ಥೆ ಮಾಡಲಾಗುತ್ತಿದ್ದು, ಸಿಹಿ ಖಾದ್ಯಗಳ ತಯಾರಿ ಆರಂಭವಾಗಿದೆ.
ಹಾವೇರಿ ನಗರದ ಹೊರ ವಲಯದ ಅಜ್ಜಯ್ಯ ದೇವಸ್ಥಾನದೆದುರು ಅಡುಗೆಗೆ ಸ್ಥಳಾವಕಾಶ ಒದಗಿಸಲಾಗಿದ್ದು, ಇಲ್ಲಿ ಸಮ್ಮೇಳನಕ್ಕೆ ಬರುವವರಿಗೆ ಶೇಂಗಾ ಹೋಳಿಗೆ, ರವೆ ಉಂಡೆ, ಮೋತಿಚೂರ್, ಲಡ್ಡು ಸೇರಿದಂತೆ ಸಿಹಿ ಖಾದ್ಯಗಳ ತಯಾರಿ ಸಾಗಿದ್ದು, ಸುಮಾರು ೨.೫ ಲಕ್ಷ ಜನರಿಗೆ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತಿದೆ. ಇದರ ಜತೆಗೆ ಸಮ್ಮೇಳನದಲ್ಲಿ ಪ್ರತಿದಿನ ಕೇಸರಿಬಾತ್, ಹೆಸರುಬೇಲೆ ಪಾಯಸ, ಶ್ಯಾವಿಗೆ ಖೀರು, ಗೋಧಿ ಹುಗಿ, ಮೈಸೂರುಪಾಕ್ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಬಡಿಸಲಾಗುತ್ತಿದ್ದು, ಈಗಾಗಲೇ ೬೦೦ಕ್ಕೂ ಹೆಚ್ಚು ಬಾಣಸಿಗರು ಸಿಹಿ ತಿಂಡಿಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಸಮ್ಮೇಳನದ ಮೊದಲ ದಿನ ೧.೫೦ ಲಕ್ಷ, ೨ನೇ ದಿನ ೧ ಲಕ್ಷ, ೩ನೇ ದಿನ ೧.೫೦ಲಕ್ಷ ಮಂದಿಗೆ ಊಟೋಪಚಾರಗಳ ವ್ಯವಸ್ಥೆ ಮಾಡಲಾಗಿದ್ದು, ಸಾಮಾನ್ಯ ವರ್ಗ, ಗಣ್ಯರು, ಅತೀ ಗಣ್ಯರು ಹೀಗೆ ಎಲ್ಲರಿಗೂ ವಿವಿಧೆಡೆ ಊಟದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಹಾಗೆಯೇ ಸಮ್ಮೇಳನದ ಮೂರು ದಿನ ಬೆಳಿಗ್ಗೆ, ಸಂಜೆ ಸಾವಯವ ಬೆಲ್ಲದ ಕಾಫಿ-ಟೀಯನ್ನು ಪೂರೈಸಲು ನಿರ್ಧರಿಸಲಾಗಿದೆ.
ಸಮ್ಮೇಳನ ನಡೆಯುವ ೧೨೮ ಎಕರೆ ವಿಶಾಲ ಪ್ರದೇಶದಲ್ಲಿ ೩೫ ಎಕರೆಯನ್ನು ಊಟೋಪಚಾರ ವ್ಯವಸ್ಥೆಗೆ ಮೀಸಲಿಡಲಾಗಿದೆ. ೨೫೦ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಮಹಿಳೆಯರು, ಅಂಗವಿಕಲರು, ೭೦ ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಊಟದ ಕವಂಡರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.ಕುಡಿಯುವ ನೀರಿಗೂ ಸಮರ್ಪಕ ವ್ಯವಸ್ಥೆ ಮಾಡಲಾಗಿದ್ದು, ಸಮ್ಮೇಳನದ ಜಾಗದಲ್ಲಿ ಕೈ ತೊಳೆಯಲು, ನೀರು ಕುಡಿಯಲು ಪೈಪ್‌ಲೇನ್ ಹಾಕಿ ೮೨೦ ನಲ್ಲಿಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಕುಡಿಯುವ ನೀರಿಗಾಗಿಯೇ ೪೧೪ ನಲ್ಲಿಗಳನ್ನು ಅಳವಡಿಸಲಾಗಿದೆ. ಎಲ್ಲರಿಗೂ ಶುದ್ಧೀಕರಿಸಿದ ನೀರನ್ನು ಒದಗಿಸಲಾಗುತ್ತಿದೆ.