ನುಡಿ ಹಬ್ಬಕ್ಕೆ ಕ್ಷಣಗಣನೆ

ಎಲ್ಲೆಡೆ ಸಂಭ್ರಮ
ಹಾವೇರಿ,ಜ೫- ಏಲಕ್ಕಿ ನಗರಿ ಶರಣ-ಸಂತರ ನಾಡು ಹಾವೇರಿಯಲ್ಲಿ ಕನ್ನಡ ನುಡಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಕನ್ನಡದ ಜಾತ್ರೆಗೆ ಹಾವೇರಿ ಸಂಪೂರ್ಣ ನವವಧುವಿನಂತೆ ಸಿಂಗಾರಗೊಂಡಿದೆ. ನಾಳೆಯಿಂದ ಮೂರು ದಿನಗಳ ಕಾಲ ಹಬ್ಬದ ಸಂಭ್ರಮ- ಸಡಗರ ಮೇಳೈಸಲಿದೆ. ಸಹಸ್ರಾರು ಕನ್ನಡಿಗರು ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೈಭವಕ್ಕೆ ಸಾಕ್ಷಿಯಾಗಲಿದ್ದಾರೆ.ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ೧೨೮ ಎಕರೆ ವಿಸ್ತೀರ್ಣದಲ್ಲಿ ವಿವಿಧ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಅಜ್ಜಯ್ಯ ದೇವಸ್ಥಾನದ ಎದುರಿನ ಜಮೀನಿನಲ್ಲಿ ೧೦೦ ಅಡಿ ಉದ್ದದ ಮುಖ್ಯ ವೇದಿಕೆಯ ಮಂಟಪವನ್ನು ಬಾಡಗ್ರಾಮದ ಕನಕದಾಸರ ಕೋಟೆ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮಂಟಪದ ಎರಡೂ ಬದಿಗಳಲ್ಲಿ ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿಗಳ ಭಾವಚಿತ್ರಗಳನ್ನು ಹಾಕಲಾಗಿದೆ.ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಪದ್ಮಶ್ರೀ ದೊಡ್ಡರಂಗೇಗೌಡ ಅವರು ಸಮ್ಮೇಳನಾಧ್ಯಕ್ಷರಾಗಿದ್ದಾರೆ.
ಪ್ರಧಾನ ವೇದಿಕೆಯ ಮುಂಭಾಗ ೩೦ ಸಾವಿರ ಜನರು ಆಸೀನರಾಗುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ.
ಸಮಾನಾಂತರ ವೇದಿಕೆಗಳಲ್ಲೂ ಸಾವಿರಾರು ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಈ ಎಲ್ಲ ವೇದಿಕೆಗಳಲ್ಲಿ ನಾಡು-ನುಡಿ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿವಿಧ ಗೋಷ್ಠಿಗಳು ನಡೆಯಲಿವೆ. ಹಾಗೆಯೇ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನುಡಿ ಜಾತ್ರೆಯನ್ನು ಮತ್ತಷ್ಟು ಕಳೆಗಟ್ಟಿಸಲಿವೆ.ಇದುವರೆಗೂ ನಡೆದ ಸಾಹಿತ್ಯ ಸಮ್ಮೇಳನಕ್ಕಿಂದ ಈ ಬಾರಿಯ ಸಮ್ಮೇಳನದಲ್ಲಿ ಸಾಕಷ್ಟು ಬದಲಾವಣೆಗಳಿರಲಿದೆ. ಸಮಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದ್ದು, ನಿಗದಿತ ವೇಳೆಗೆ ಕಾರ್ಯಕ್ರಮಗಳು ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ದಿ. ಡಾ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣೆಯನ್ನು ಮಾಡಲಾಗುತ್ತದೆ ಎಂದು ಕ.ಸಾ.ಪ ಅಧ್ಯಕ್ಷ ಮಹೇಶ್‌ಜೋಷಿ ಹೇಳಿದರು.

ನಾಳೆಯಿಂದ ಹಾವೇರಿಯಲ್ಲಿ ಆರಂಭವಾಗಲಿರುವ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿದ್ದು, ಪ್ರಧಾನ ವೇದಿಕೆಯನ್ನು ಕ.ಸಾ.ಪ ಅಧ್ಯಕ್ಷ ಮಹೇಶ್‌ಜೋಷಿ ಪರಿಶೀಲಿಸಿದರು.

ವಿಶೇಷ ರಥ
ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವಿಶೇಷ ರಥವನ್ನು ಸಿದ್ಧಗೊಳಿಸಲಾಗಿದೆ. ಕಲಾವಿದ ಶಹಜಾನ್ ಮುದಕವಿ ಪರಿಕಲ್ಪನೆಯಲ್ಲಿ ಪ್ರಾಚೀನ ಕಾಲದ ರಥಗಳ ಮಾದರಿಯಲ್ಲಿ ಈ ರಥವನ್ನು ೧೫ ಕಲಾವಿದರ ತಂಡ ಸಿದ್ಧಗೊಳಿಸಿದೆ. ಕನ್ನಡದ ಹಸ್ಮಿತೆಯನ್ನು ಸಾರುವ ರಥವನ್ನು ವಿಶೇಷ ರಥದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ದೊಡ್ಡರಂಗೇಗೌಡರವರು ಕೂರಲು ಅವಕಾಶ ಕಲ್ಪಿಸಲಾಗಿದೆ.
ನಾಳೆ ಶುಕ್ರವಾರ ಬೆಳಿಗ್ಗೆ ೭ ಗಂಟೆಗೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ, ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡುವರು. ಹಾಗೆಯೇ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಅವರು ಪರಿಷತ್‌ನ ಧ್ವಜಾರೋಹಣ ಮಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ನಾಡಧ್ವಜಾರೋಹಣ ಮಾಡಿ ಅಕ್ಷರ ಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ನಂತರ ಬೆಳಗ್ಗೆ ೭.೩೦ಕ್ಕೆ ಸಮ್ಮೇಳನಾಧ್ಯಕ್ಷ ಪದ್ಮಶ್ರೀ ಡಾ. ದೊಡ್ಡರಂಗೇಗೌಡರನ್ನು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳುವ ಕಾರ್ಯಕ್ರಮವನ್ನು ಹಾವೇರಿ ನಗರ ಸಭೆ ಅಧ್ಯಕ್ಷ ಸಂಜೀವ ಕುಮಾರ ನೀಲರಗಿ ಉದ್ಘಾಟಿಸಲಿದ್ದಾರೆ.
ಮಾಜಿ ಸಚಿವ ಬಸವರಾಜ ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದು, ಇದರಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಮೊಹಮ್ಮದ್ ರೋಷನ್, ಎಸ್‌ಪಿ ಹನುಮಂತರಾಯ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಬಸ್ ನಿಲ್ದಾಣ, ಆರ್‌ಟಿಒ ಕಚೇರಿ ಮಾರ್ಗವಾಗಿ ಸಮ್ಮೇಳನ ವೇದಿಕೆಗೆ ತಲುಪಲಿದೆ.
ಸಮಾರಂಭದ ಉದ್ಘಾಟನೆ:
ನಾಳೆ ಬೆಳಿಗ್ಗೆ ೧೦-೩೦ಕ್ಕೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿ ಉದ್ಘಾಟನಾ ನುಡಿಗಳನ್ನಾಡುವರು. ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಉಪಸ್ಥಿತಿಯಲ್ಲಿ ಶಾಸಕರು ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ನೆಹರು ಓಲೇಕಾರ ಅವರು ಸ್ವಾಗತ ಭಾಷಣ ಮಾಡುವರು. ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಅರಬೈಲ್ ಶಿವರಾಮ ಹೆಬ್ಬಾರ ಅವರಿಂದ ಮೊದಲ ಮಾತು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರಿಂದ ಆಶಯ ನುಡಿ, ಸಮ್ಮೇಳನಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡರಿಂದ ಭಾಷಣ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರಿಂದ ಪರಿಷತ್ತಿನ ಪುಸ್ತಕಗಳ ಬಿಡುಗಡೆ, ಕನ್ನಡ ಮತ್ತು ಸಂಸ್ಕೃತಿ ಇಂಧನ ಖಾತೆ ಸಚಿವರಾದ ವಿ. ಸುನಿಲ್‌ಕುಮರ್ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಂದ ವೇದಿಕೆ ಉದ್ಘಾಟನೆ, ಸಂಸದ ಶಿವಕುಮಾರ ಉದಾಸಿ ಅವರಿಂದ ಹಾವೇರಿ ಜಿಲ್ಲಾ ಪುಸ್ತಕಗಳ ಬಿಡುಗಡೆ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರ ಚಿತ್ರಕಲಾಪ್ರದರ್ಶನ, ಶಾಸಕರಾದ ಅರುಣಕುಮಾರ ಪೂಜಾರ ಅವರು ವಾಣಿಜ್ಯ ಮಳಿಗೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಪುಸ್ತಕ ಮಳಿಗೆ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ವಿಧಾನ ಪರಿಷತ್ ಸದಸ್ಯರಾದ ಆರ್.ಶಂಕರ್ ವಸ್ತು ಪ್ರದರ್ಶನ ಹಾಗೂ ಪ್ರದೀಪ ಶೆಟ್ಟರ ಮಾಧ್ಯಮ ಕೇಂದ್ರ ಉದ್ಘಾಟಿಸಲಿದ್ದಾರೆ.ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಕೆಲಗಾರ, ವಿಧಾನ ಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ಮನೋಹರ ತಹಶೀಲ್ದಾರ, ರುದ್ರಪ್ಪ ಲಮಾಣಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಉಪಸ್ಥಿತರಿರುವರು.

ನುಡಿ ಜಾತ್ರೆಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಿದ್ಧವಾಗಿರುವ ವಿಶೇಷ ರಥ

ಭೂರಿ ಭೋಜನ ವಿಶೇಷ ಭಕ್ಷ್ಯಗಳು
ಸಮ್ಮೇಳನದಲ್ಲಿ ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿದಿನವೂ ೧.೫ ಲಕ್ಷ ಜನರಿಗೆ ಊಟ ಹಾಗೂ ೭೦ ಸಾವಿರ ಮಂದಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿರುವುದು ವಿಶೇಷ.ಸಮ್ಮೇಳನಕ್ಕೆ ಬರುವವರಿಗೆ ಶೇಂಗಾ ಹೋಳಿಗೆ, ರವೆ ಉಂಡೆ, ಮೋತಿಚೂರ್, ಲಡ್ಡು ಸೇರಿದಂತೆ ಸಿಹಿ ಖಾದ್ಯಗಳ ತಯಾರಿ ಸಲಾಗಿದ್ದು, ಸುಮಾರು ೨.೫ ಲಕ್ಷ ಜನರಿಗೆ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತಿದೆ. ಇದರ ಜತೆಗೆ ಸಮ್ಮೇಳನದಲ್ಲಿ ಪ್ರತಿದಿನ ಕೇಸರಿಬಾತ್, ಹೆಸರುಬೇಳೆ ಪಾಯಸ, ಶ್ಯಾವಿಗೆ ಖೀರು, ಗೋಧಿ ಹುಗಿ, ಮೈಸೂರುಪಾಕ್ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಬಡಿಸಲಾಗುವುದು. ಈಗಾಗಲೇ ೬೦೦ಕ್ಕೂ ಹೆಚ್ಚು ಬಾಣಸಿಗರು ಸಿಹಿ ತಿಂಡಿಗಳನ್ನು ಸಿದ್ಧಪಡಿಸುತ್ತಿದ್ದಾರೆ.ಸಮ್ಮೇಳನದ ಮೊದಲ ದಿನ ೧.೫೦ ಲಕ್ಷ, ೨ನೇ ದಿನ ೧ ಲಕ್ಷ, ೩ನೇ ದಿನ ೧.೫೦ಲಕ್ಷ ಮಂದಿಗೆ ಊಟೋಪಚಾರಗಳ ವ್ಯವಸ್ಥೆ ಮಾಡಲಾಗಿದ್ದು, ಸಾಮಾನ್ಯ ವರ್ಗ, ಗಣ್ಯರು, ಅತೀ ಗಣ್ಯರು ಹೀಗೆ ಎಲ್ಲರಿಗೂ ವಿವಿಧೆಡೆ ಊಟದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಹಾಗೆಯೇ ಸಮ್ಮೇಳನದ ಮೂರು ದಿನ ಬೆಳಿಗ್ಗೆ, ಸಂಜೆ ಸಾವಯವ ಬೆಲ್ಲದ ಕಾಫಿ-ಟೀಯನ್ನು ಪೂರೈಸಲು ನಿರ್ಧರಿಸಲಾಗಿದೆ.
ಸಮ್ಮೇಳನ ನಡೆಯುವ ೧೨೮ ಎಕರೆ ವಿಶಾಲ ಪ್ರದೇಶದಲ್ಲಿ ೩೫ ಎಕರೆಯನ್ನು ಊಟೋಪಚಾರ ವ್ಯವಸ್ಥೆಗೆ ಮೀಸಲಿಡಲಾಗಿದೆ. ೨೫೦ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಮಹಿಳೆಯರು, ಅಂಗವಿಕಲರು, ೭೦ ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಊಟದ ಕೌಂಟರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.