ನುಡಿನಮನ, ಪ್ರವಚನ ಕಾರ್ಯಕ್ರಮ

ನವಲಗುಂದ,ಡಿ31 : ವಿಜಯಪುರದ ಜ್ಞಾನಯೋಗಾಶ್ರಮದ ಸ್ವಾಮೀಜಿಗಳು, ಶತಮಾನದ ಸಂತ ಸಿದ್ದೇಶ್ವರ ಶ್ರೀಗಳು ಇವತ್ತು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಪ್ರವಚನ, ಪರಿಪೂರ್ಣ ಬದುಕಿಗೆ ದಾರಿ ದೀಪವಾಗಿದ್ದ ಸಂದೇಶಗಳು, ಹಿತ ನುಡಿಗಳು ಎಂದೆಂದಿಗೂ ಜೀವಂತ ಎಂದು ಹೊಸಳ್ಳಿ ಮಹಾಸಂಸ್ಥಾನಮಠ ಜಗದ್ಗುರು ಬೂದೀಶ್ವರ ಮಾಹಾಸ್ವಾಮಿಗಳು ನುಡಿದರು.

ಅವರು ತಾಲ್ಲೂಕಿನ ಭೋಗಾನೂರ” ಗ್ರಾಮದ ಸದ್ಭಕ್ತರುಗಳಿಂದ ಕಲ್ಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಜಯಪುರದ ಲಿಂ. ಶ್ರೀ ಸಿದ್ದೇಶ್ವರ ಸ್ವಾಮಿಗಳು ಜ್ಞಾನಯೋಗಾಶ್ರಮದ ಪ್ರಥಮ ಪುಣ್ಯಾರಾಧನೆ ನಿಮಿತ್ಯ ನುಡಿನಮನ ಮತ್ತು ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸಿದ್ಧೇಶ್ವರ ಸ್ವಾಮೀಜಿ ಸರಳ, ಸಜ್ಜನಿಕೆಯ ಪೂಜನೀಯ ವ್ಯಕ್ತಿತ್ವ. ಅವರು ಯಾವತ್ತೂ ಯಾವುದೇ ವಸ್ತುಗಳಿಗೆ ಆಸೆಪಟ್ಟಿಲ್ಲ, ತಮ್ಮ ಬಳಿ ಏನೇ ವಸ್ತು ಇರಬಾರದು ಎಂಬ ಉದ್ದೇಶಕ್ಕೆ ಜೇಬು ಇಲ್ಲದ ಅಂಗಿ ಧರಿಸುತ್ತಿದ್ದರು. ತಮಗೆ ಬಂದಂಥ ಪದ್ಮಶ್ರೀ ಸೇರಿ ಹಲವಾರು ಪ್ರಶಸ್ತಿಗಳನ್ನು ನಯವಾಗಿ ಬೇಡ ಎಂದಂಥ ಮೇರು ವ್ಯಕ್ತಿತ್ವದ ಮಹಾತ್ಮಾ, ಮಹಾನ್ ಯೋಗಿ ಎಂದರು.

ಬೆಳಹೊಡ ಗ್ರಾಮದ ಸಿದ್ದಾರೂಢಮಠದ ಶ್ರೀಪರಿಪೂರ್ಣಾನಂದ ಭಾರತಿ ಮಹಾಸ್ವಾಮಿಗಳು ಮಾತನಾಡಿ, ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ನುಡಿಶೂರರೂ ನಡೆಶೂರರೂ ಆಗಿದ್ದರು. ಅವರು ಕಾವಿ ತೊಡಲಿಲ್ಲ, ರುದ್ರಾಕ್ಷಿ ಮಾಲೆ ಧರಿಸಲಿಲ್ಲ. ಆದರೂ ಎಲ್ಲ ಮಠಾಧೀಶರಿಗಿಂತ ಹೆಚ್ಚು ಗೌರವ ಪಡೆದರು ಎಂದರು.

ವೇದಿಕೆಯಲ್ಲಿ ಭೋಗಾನೂರ ಗ್ರಾಮದ ಬಬಲಾದಿಮಠದ ಶ್ರೀ.ವೇ.ಮೂ.ಅಪ್ಪಯ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಪ್ರವಚನ ಕಾರ್ಯಕ್ರಮದಲ್ಲಿ ಭೋಗನೂರ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.