ನುಡಿದಂತೆ ನಡೆಯುವವರು ವಿರಳ:ರಾಜೇಂದ್ರಕುಮಾರ್ ಬಿರಾದಾರ್

ವಿಜಯಪುರ:ಜ.18: ಸಿದ್ಧೇಶ್ವರ ಶ್ರೀಗಳು ನುಡಿದಂತೆ ನಡೆದು ವಿಶ್ವ ಮಾನವರಾದರು. ಸ್ವಾಮಿ ವಿವೇಕಾನಂದರು ಧರ್ಮಜ್ಯೋತಿಯನ್ನು ವಿಶ್ವದೆಲ್ಲೆಡೆಯೊ ಪಸರಿಸಿ ಮನುಷ್ಯ ಧರ್ಮದ ಶ್ರೇಷ್ಠ ಸನ್ಯಾಸಿ ಎಂದೆನಿಸಿಕೊಂಡರು. ಈರ್ವರ ನಡೆ-ನುಡಿಗಳು ಜಗತ್ತಿನ ಎಲ್ಲ ಸನ್ಯಾಸಿ-ವಿರಾಗಿಗಳಿಗೆ ಮಾದರಿಯಾದುದಾಗಿದೆ. ಆದರೆ ನುಡಿದಂತೆ ನಡೆದವರು ಮತ್ತು ನಡೆಯುವವರು ಅತೀ ವಿರಳಾತಿವಿರಳ ಎಂದು ಬರಹಗಾರ ರಾಜೇಂದ್ರಕುಮಾರ್ ಬಿರಾದಾರ್ ಅಭಿಪ್ರಾಯಪಟ್ಟರು.

ಅವರು ಸೋಮವಾರದಂದು ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ನೂತನ ಪದವಿಪೂರ್ವ ಕಾಲೇಜಿನಲ್ಲಿ ಗ್ರಾಮದ ಗೆಳೆಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಶ್ರೀ ಸಿದ್ದೇಶ್ವರ ಶ್ರೀಗಳು ಒಂದು ನೆನೆಪು ಹಾಗೂ ರಾಷ್ಟ್ರೀಯ ಯುವದಿನ” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ, ಯಾವ ಬೇಕುಗಳಿಗೂ ದಾಸರಾಗದೆ, ಯಾವ ಆಕರ್ಷಣೆಗಳಿಗೂ ವಿಚಲಿತರಾಗದೆ ಬದುಕು ಸವೆಸಿದರು. ಕಾವಿ ಧರಿಸಿದ ಮತ್ತು ಹೊಸದಾಗಿ ಕಾವಿ ಧರಿಸಬಯಸುವವರು ಈರ್ವ ಶ್ರೀಗಳ ಬದುಕನ್ನೊಮ್ಮೆ ಅವಲೋಕಿಸಿದರೂ ಆದೀತು. ಇಂದಿನ ಸನ್ಯಾಸಿಗಳ ಬದುಕು ಶ್ರೇಷ್ಠ ಮತ್ತು ಪಾವನವಾದೀತು ಎಂದು ನುಡಿದರು.

ಸಹಕಾರಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಬಿ.ಆರ್. ಬನಸೋಡೆ ಮಾತನಾಡಿ, ಈ ಮನುಷ್ಯ ಜಗತ್ತಿನಲ್ಲಿ ಪ್ರತಿಯೊಬ್ಬರು ಸ್ವಾರ್ಥಿಗಳೇ ಆಗಿದ್ದಾರೆ. ಅದರಲ್ಲೂ ಒಂದಿಷ್ಟು ಸಮಯವನ್ನು ನೆರೆಹೊರೆಗೆ, ಸಮಾಜಕ್ಕೆ ಮೀಸಲಿಡುವುದು ನಮ್ಮ ಬದುಕಿನ ಮತ್ತೊಂದು ಅಂಗವಾಗಬೇಕು. ಆದರೆ ಎಲ್ಲರೂ ಭೌತಿಕ ನೆಲೆಗಟ್ಟನ್ನು ಹುಡುಕಿಕೊಂಡು ಸ್ಥಾವರಗಳಾಗುವವರೇ ಆಗಿದ್ದಾರೆ. ಜಂಗಮರಾಗಿ, ನಿಜಸೇವಕರಾಗಿ, ಜನರ ಮನಶುದ್ಧಿಗಾಗಿ, ಲೋಕಕಲ್ಯಾಣಕ್ಕಾಗಿ ಬದುಕನ್ನು ಮುಡುಪಾಗಿಡುವವರು ಶತಕೋಟಿಗಳಲ್ಲೊಬ್ಬರು. ಅಂತಹ ಶ್ರೇಷ್ಠ ಯೋಗಿಗಳಲ್ಲಿ ವಿವೇಕಾನಂದರು ಹಾಗೂ ಶ್ರೀ ಸಿದ್ಧೇಶ್ವರ ಶ್ರೀಗಳು ಪ್ರಥಮ ಪಂಕ್ತಿಯಲ್ಲಿ ಎದ್ದು ಕಾಣುವಂತಹ ನಿಲುವು ಉಳ್ಳವರು ಎಂದು ನುಡಿದರು.

ಕಾಲೇಜಿನ ಪ್ರಾಚಾರ್ಯ ಎಸ್.ಪಿ. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ಉಪನ್ಯಾಸಕ ಯೋಗೇಶ್ವರಪ್ಪ ಮಾತನಾಡಿದರು. ವೇದಿಕೆಯ ಮೇಲೆ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಚ್.ಎಂ. ನದಾಫ ಇದ್ದರು. ಈ ಕಾರ್ಯಕ್ರಮದಲ್ಲಿ ಖಾಜೇಸಾಬ ಕಲ್ಬುರ್ಗಿ,ಅಶೋಕ ಬೈಚಬಾಳ, ವೀರಭದ್ರ ರಂಜುಣಗಿ, ಬಿ.ಎಸ್. ಕೂಡಗಿಮಠ, ಗೋಲು ಬೈಚಬಾಳ ಹಾಗೂ ಮತ್ತಿತರರು ಇದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಗೆಳೆಯರ ಬಳಗದ ಸಂಚಾಲಕ ಸಮೀರ ಸಯ್ಯದ ಸ್ವಾಗತಿಸಿದರು. ಶಿಕ್ಷಕ ವಿನೋದ ಸಜ್ಜನ ನಿರೂಪಿಸಿ, ವಂದಿಸಿದರು.