ನುಡಿದಂತೆ ನಡೆದ ಕಾಂಗ್ರೆಸ್

ಬೆಂಗಳೂರು, ಜೂ.೩- ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರ ಬದುಕಿನ ಬವಣೆಗಳನ್ನು ನೀಗಿಸುವ, ಪಕ್ಷದ ಪ್ರಣಾಳಿಕೆಯಂತೆ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ.ಆನಂದಕುಮಾರ್ ತಿಳಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ೫ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ೧೫ ದಿನಗಳಲ್ಲಿ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದ್ದಾರೆ.
೨೦೦ ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ೨೦೦೦ ರೂ., ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ೧೦ ಕೆ.ಜಿ. ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪದವಿಧರರಿಗೆ ನಿರುದ್ಯೋಗ ಭತ್ಯೆ ಯೋಜನೆ ಜಾರಿಗೊಳಿಸುವ ಮೂಲಕ ಬಡವರ ಕೈಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದಿನ ಡಬ್ಬಲ್ ಎಂಜಿನ್ ಸರ್ಕಾರದ ನೀತಿಗಳಿಂದ ಜನಸಾಮಾನ್ಯರ ಬದುಕು ಹೈರಾಣಾಗಿತ್ತು. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದರು. ನೋಟ್‌ಬ್ಯಾನ್, ಜಿಎಸ್‌ಟಿ, ಕೊರೋನ ಲಾಕ್‌ಡೌನ್‌ನಿಂದ ಜನರ ಬದುಕು ತಲ್ಲಣಗೊಂಡಿತ್ತು. ಪ್ರಸ್ತುತ ಈ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಅವರ ಬದುಕಿಗೆ ಚೈತನ್ಯ ತುಂಬಿದೆ. ಯೋಜನೆಗಳು ಜನಸಾಮಾನ್ಯರಿಗೆ ಆಶಾದಾಯಕವಾಗಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಯೋಜನೆಗಳ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡಿತ್ತಲ್ಲದೆ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರ, ಶೋಷಿತರ ಬದುಕಿಗೆ ಬೆಳಕಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ. ಈವರೆಗೆ ರಾಜ್ಯದಲ್ಲಿ ಹಿಜಾಬ್, ಅಲಾಲ್, ಜಟ್ಕಾಕಟ್ ಇಂತಹ ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಜನರ ಬದುಕಿಗೆ ಅಗತ್ಯವಾದ ವಿಷಯಗಳು ಗೌಣವಾಗಿದ್ದವು.
ಆದರೆ ಕಾಂಗ್ರೆಸ್ ಸರ್ಕಾರ ಜನರ ಬವಣೆಗಳನ್ನು ನೀಗಿಸುವ ಮೂಲಕ ಜನರ ಬಾಳಲ್ಲಿ ಆಶಾಕಿರಣ ಮೂಡಿಸಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಸರ್ಕಾರದ ಮೂಲಕ ಗ್ಯಾರಂಟಿ ಮೂಡಿದೆ. ರಾಜ್ಯದಲ್ಲಷ್ಟೇ ಅಲ್ಲ . ದೇಶದಲ್ಲೂ ಕೂಡ ಬದಲಾವಣೆ ಗಾಳಿ ಬೀಸಲಿದೆ ಎಂದು ಡಾ.ಆನಂದಕುಮಾರ್ ಅಭಿಪ್ರಾಯಪಟ್ಟಿದ್ದಾರೆ.