ನುಡಿದಂತೆ ನಡೆದಿದ್ದೇವೆ: ಸಿದ್ದು

ಬೆಂಗಳೂರು, ಜ. ೧೩- ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ನಾವು ಉಳಿದವರಂತೆ ವಚನ ಭ್ರಷ್ಟರಲ್ಲ, ವಚನ ಪಾಲಕರು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿಯನ್ನೇ ಗುರಿಯಾಗಿ ವಾಗ್ದಾಳಿ ನಡೆಸಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ನುಡಿದಂತೆ ನಡೆಯುತ್ತೇವೆ ಎನ್ನುವುದು ನಾವು ಜನತೆಗೆ ನೀಡಿರುವ ವಚನ. ಉಳಿದವರಂತೆ ನಾವು ವಚನ ಭ್ರಷ್ಟರಲ್ಲ ವಚನ ಪಾಲಕರು ಎಂದಿದ್ದಾರೆ.ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಲ್ಲಿ ೫ ಕ್ಕೆ ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು, ಜನರಿಂದ ಆಯ್ಕೆಯಾದ ಒಂದು ಸರ್ಕಾರದ ಕರ್ವತ್ಯ. ಆ ಯೋಜನೆಗಳು ದುರುಪಯೋಗವಾಗದಂತೆ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಾಗಿರುವುದು ಜನರ ಕರ್ತವ್ಯ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳು ಉಚಿತ ಯೋಜನೆಗಳು ಎಂಬ ತಪ್ಪು ಕಲ್ಪನೆ ಬೇಡ. ಇದು ನಿಮ್ಮದೆ ತೆರಿಗೆ ಹಣ, ನಿಮ್ಮದೆ ಕಲ್ಯಾಣ ಕಾರ್ಯಕ್ರಮಗಳು ಎಂದು ಅವರು ಟ್ವೀಟ್‌ನಲ್ಲಿ ಜನತೆಗೆ ಹೇಳಿದ್ದಾರೆ.
ಗ್ಯಾರಂಟಿಗಳ ಪ್ರತಿ ಪೈಸೆಯೂ ಬದುಕಿಗೆ ಸದುಪಯೋಗವಾಗಬೇಕು. ಚುನಾಣಾ ಪ್ರಣಾಳಿಕೆಯನ್ನು ಪ್ರಚಾರಕ್ಕೆ ಸೀಮಿತಗೊಳಿಸದೆ ಅದನ್ನು ಕಾರ್ಯರೂಪಕ್ಕೆ ತಂದು ಜನರ ಬದುಕಿನಲ್ಲಿ ಅವರ ಪ್ರತಿಫಲ ಕಾಣಬೇಕು ಎಂಬ ಆಶಯ ನಮ್ಮದು. ನಮ್ಮ ಸರ್ಕಾರದ ಸದಾಶಯಕ್ಕೆ ತಮ್ಮೆಲ್ಲರ ಬೆಂಬಲವಿರಲಿ. ಗ್ಯಾರಂಟಿಗಳ ಗೆಲುವು ಕರ್ನಾಟಕದ ಗೆಲುವು, ನಿಮ್ಮೆಲ್ಲರ ಗೆಲುವು ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.