ನುಡಿದಂತೆ ನಡೆದಿದ್ದೇವೆ, ಸರ್ಕಾರದ ಪರವಾಗಿರಿ; ಡಾ; ಶಾಮನೂರು ಶಿವಶಂಕರಪ್ಪ

ಸಂಜೆವಾಣಿ ವಾರ್ತೆ
ದಾವಣಗೆರೆ, ಫೆ.೩; ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಲಾಗಿದ್ದ ಉಚಿತ ಪ್ರಯಾಣದ ಶಕ್ತಿ, 200 ಯುನಿಟ್‍ವರೆಗೆ ಉಚಿತ ಕರೆಂಟ್ ಗೃಹಜ್ಯೋತಿ, ಮನೆ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ನೀಡುವ ಗೃಹಲಕ್ಷ್ಮಿ, 10 ಕೆ.ಜಿ.ಅಕ್ಕಿ ನೀಡುವ ಅನ್ನಭಾಗ್ಯ, ಪದವೀಧರ, ಡಿಪ್ಲೊಮಾ ಉತ್ತೀರ್ಣರಾದವರಿಗೆ ಎರಡು ವರ್ಷಗಳ ವರೆಗೆ ನಿರುದ್ಯೋಗ ಭತ್ಯೆ ನೀಡುವ ಗ್ಯಾರಂಟಿ ಯೋಜನೆಗಳನ್ನು ಚಾಚು ತಪ್ಪದೇ ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ. ಇದು ಜನಪರ ಸರ್ಕಾರವಾಗಿದ್ದು ಜನರು ಸಹ ಸರ್ಕಾರದ ಪರವಾಗಿರಬೇಕೆಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.ಅವರು  ದಾವಣಗೆರೆ ತಾ; ಕುಕ್ಕುವಾಡ ಗ್ರಾಮದಲ್ಲಿ ಏರ್ಪಡಿಸಲಾದ ಗ್ಯಾರಂಟಿ ಯೋಜನೆಗಳ ಗ್ರಾಮ ಮಟ್ಟದ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಜನರಿಗೆ ನೀಡಿದ ಆಶ್ವಾಸನೆಯಂತೆ ನಿಗದಿತ ಸಮಯದಲ್ಲಿಯೇ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಕಲ್ಪಿಸಿದೆ. ಗ್ಯಾರಂಟಿ ಯೋಜನೆಗಳಿಂದ ಕುಟುಂಬದಲ್ಲಿ ಆರ್ಥಿಕ ಬಲ ಬಂದಿದ್ದು ಜೀವನ ಮಟ್ಟ ಸುಧಾರಣೆ ಹಾಗೂ ನಿರ್ವಹಣೆಯು ಸುಲಭವಾಗಿದೆ. ಬಡವರು, ಮಧ್ಯಮ ವರ್ಗದವರಿಗೆ ಗ್ಯಾರಂಟಿ ಯೋಜನೆಗಳಿಂದ ಬಹಳ ಅನುಕೂಲವಾಗಿದೆ ಎಂದರು.ಕೆಲವೊಂದು ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ರೂ.2000 ಮತ್ತು ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ.ಅಕ್ಕಿ ಬದಲಿಗೆ ನೀಡಲಾಗುವ ಹಣವು ಆಧಾರ್ ಜೋಡಣೆ, ಪಡಿತರ ಚೀಟಿಯ ತಿದ್ದುಪಡಿ, ಆಧಾರ್ ತಿದ್ದುಪಡಿಯ ಕಾರಣದಿಂದ ಬಾರದೆ ಇರಬಹುದು. ಅಧಿಕಾರಿಗಳು ಇರುವ ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವರು, ಯಾವುದೇ ಆತಂಕ ಬೇಡ ಎಂದು ತಿಳಿಸಿದರು.