ನುಡಿದಂತೆ ನಡೆದವರು ಕಾಯಕಯೋಗಿ ಸೊನ್ನಾಲಿಗೆಯ ಸಿದ್ದರಾಮೇಶ್ವರರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.18: ನುಡಿದಂತೆ ನಡೆದವರು ಕಾಯಕಯೋಗಿ ಸೊನ್ನಾಲಿಗೆಯ ಸಿದ್ದರಾಮೇಶ್ವರರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರರ ಜಯಂತಿ ಹಾಗೂ ಸ್ವಾಮಿ ವಿವೇಕಾನಂದರ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಅನುಭವ ಮಂಟಪದಲ್ಲಿ ಬಸವಣ್ಣನವರ ಅನುಯಾಯಿಗಳು ಹಾಗೂ ಪ್ರಥಮ ಶ್ರೇಣಿ ವಚನಕಾರರಾಗಿ ಸಾವಿರಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ.
ಅವರ ವಚನಗಳು ವಸುದೀಶ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಅಂಕಿತದಿಂದ ಅಂತ್ಯಗೊಳ್ಳುತ್ತವೆ.
ಬಸವಣ್ಣನೇ ತಂದೆ,ಬಸವಣ್ಣನೇ ತಾಯಿ, ಬಸವಣ್ಣನೇ ಪರಮ ಬಂಧುವೆನಗೆ ಎಂಬ ವಚನ ಓದಿದರೆ ತಿಳಿಯುತ್ತದೆ ಅವರು ಬಸವಣ್ಣನವರನ್ನು ಎಷ್ಟು ಆರಾಧಿಸುತ್ತಿದ್ದರು ಎಂದು.
ಆದ್ದರಿಂದ ವಿದ್ಯಾರ್ಥಿಗಳು ಸುಳ್ಳು ಹೇಳಬಾರದು. ಪುಸ್ತಕ ಪೆನ್ನು, ಕಂಪಾಕ್ಸ್ ಹಾಗೂ ಹಣ ಕದಿಯುವುದನ್ನು ಕಲಿಯದೇ ಉತ್ತಮ ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ನಲಿಕಲಿ ಶಿಕ್ಷಕಿ ಕೆ.ಸುಮತಿ ಕಾರ್ಯಕ್ರಮ ಉದ್ಘಾಟಿಸಿ,ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಕಷ್ಟ ಪಟ್ಟು ಕಲಿತು ಉನ್ನತ ಹುದ್ದೆಗಳನ್ನು ಪಡೆಯಬೇಕೆಂದು ಹೇಳಿದರು.
ಹಿಂದಿ ಶಿಕ್ಷಕಿ ದಿಲ್ಷಾದ್ ಬೇಗಂ, ಇಂಗ್ಲೀಷ್ ಶಿಕ್ಷಕಿ ಉಮ್ಮೆಹಾನಿ ಅವರು ಏಳನೇ ತರಗತಿಯ ವಿಜೇತ ಮಕ್ಕಳಾದ ಕುರುಬರ ಅನುಷ್ಕಾ ಹಾಗೂ ಜಿ.ಸವಿತಾ ಗೆ ಬಹುಮಾನ ವಿತರಿಸಿದರು.
ಶಿಕ್ಷಕರಾದ ಎಸ್. ರಾಮಾಂಜಿನೇಯ, ಪೋಷಕ ಪ್ರತಿನಿಧಿ ಜಿ.ಸುಂಕಮ್ಮ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಉಪಸ್ಥಿತರಿದ್ದರು.