ನುಗ್ಗೆಕಾಯಿಯ ಉಪಯೋಗಗಳು

ನುಗ್ಗೆಕಾಯಿಯು ಒಂದು ಬಹುವಾರ್ಷಿಕ ಬೆಳೆ, ಇದು ೮ ರಿಂದ ೧೦ ಮೀ. ಎತ್ತರ ಬೆಳೆಯುತ್ತದೆ. ವರ್ಷದಲ್ಲಿ ೨ – ೩ ಸಲ ಹೂ ಬಿಡುತ್ತದೆ. ಈ ಗಿಡದ ಹೂ ಬಿಳಿಯ ಬಣ್ಣದ್ದಾಗಿರುತ್ತದೆ. ಹೂವು ಗೊಂಚಲುಗೊಂಚಲಾಗಿ ಬಿಡುತ್ತದೆ. ಇದೊಂದು ಉತ್ತಮ ತರಕಾರಿ. ಇದರ ಬೇರು, ಎಲೆ, ಹೂ, ಕಾಯಿ, ಬೀಜ ಎಲ್ಲವೂ ಉಪಯೋಗಕ್ಕೆ ಬರುತ್ತವೆ. ಇದರಲ್ಲಿ ತೇವಾಂಶ, ಸಸಾರಜನಕ, ಮೇದಸ್ಸು, ಖನಿಜಾಂಶ, ನಾರಿನಾಂಶ, ಕಾರ್ಬೋಹೈಡ್ರೈಟ್ಸ್, ಫಾಸ್ಪರಸ್, ಕ್ಯಾಲ್ಸಿಯಂ, ಕಬ್ಬಿಣ, ನಿಕೋಟಿನ್, ವಿಟಮಿನ್ ಎ ಮತ್ತು ಸಿ ದೊರೆಯುತ್ತದೆ. ಇದರಿಂದ ಹುಳಿ, ಪಲ್ಯ, ಹೂವಿನಿಂದಲೂ ಪಲ್ಯ ಮಾಡಬಹುದು.
೧. ನುಗ್ಗೆಗಿಡದ ಬೇರು: ಬೇರು ಹೆಚ್ಚು ಉಪಯೋಗವಾಗುತ್ತದೆ. ಬೇರಿನ ರಸ, ಶ್ವಾಸಕೋಶ ಮತ್ತು ಶರೀರದ ಶಕ್ತಿವರ್ಧಕ. ಸ್ತ್ರೀಯರಿಗೆ ಮುಟ್ಟು ಸರಿಯಾಗಿ ಆಗುವಂತೆ ಮಾಡುತ್ತದೆ. ಮೂತ್ರಜನಕ, ರಕ್ತವರ್ಧಕ, ಗಂಟಲುನೋವು, ಕಫ, ಜ್ವರ, ಮೂಲವ್ಯಾಧಿ, ಹಸಿವಿನ ಕೊರತೆ, ಎಲ್ಲವನ್ನೂ ನೀಗಲು ಈ ಬೇರಿನ ರಸ ಸಹಾಯಕವಾಗುತ್ತದೆ. ಬೇರಿನ ರಸವನ್ನು ಕಿವಿನೋವಿಗೆ ಬಳಸಬಹುದು. ಹೊಟ್ಟೆಯಲ್ಲಿ ಜಂತುಹುಳು ನಿವಾರಕ ಹಾಗೂ ವಾಯುನಿವಾರಕ್ಕೂ ಇದು ರಾಮಬಾಣ.
೨. ನುಗ್ಗೆಕಾಯಿ: ಇದು ಅಧಿಕ ಉಷ್ಣಾಂಶವನ್ನು ಹೊಂದಿದ್ದು, ಜೀರ್ಣಕಾರಕ, ಕಾಮೋತ್ತೇಜಕ, ರೋಗನಿರೋಧಕ, ಜಂತು ನಿವಾರಕ, ನೋವು ನಿವಾರಕ, ಹೃದಯಕ್ಕೆ ಮತ್ತು ಕಣ್ಣಿನ ರೋಗಕ್ಕೆ ಉಪಯುಕ್ತ. ತೊದಲುವಿಕೆ ನಿವಾರಣೆ, ಹುಣ್ಣುಗಳು ನಿವಾರಣೆ ಮಾಡುತ್ತದೆ.
೩. ಬೀಜ: ನುಗ್ಗೆಕಾಯಿಯ ಬೀಜದಿಂದ ತೆಗೆಯುವ ತೈಲ, ಸಂಧಿವಾತ ನೋವಿಗೆ, ಹೆಬ್ಬೆರಳು ನೋವಿಗೆ ಒಳ್ಳೆಯ ಉಪಚಾರ.
೪. ದೈಹಿಕ ಶಕ್ತಿ, ನರದೌರ್ಬಲ್ಯ, ನೆಗಡಿ: ೨ ಲೋಟ ನೀರಿಗೆ ಒಂದು ಹಿಡಿ ಸೊಪ್ಪನ್ನು ತಟ್ಟೆಮುಚ್ಚಿ ಚೆನ್ನಾಗಿ ಬೇಯಿಸಿ ನಂತರ, ಆ ಪಾತ್ರೆಯನ್ನು ತಣ್ಣೀರಿನಲ್ಲಿಟ್ಟು ತಣ್ಣಗೆ ಮಾಡಿ ನಂತರ ಶೋಧಿಸಿ, ಶೋಧಿಸಿದ ನೀರಿಗೆ ಉಪ್ಪು, ಕಾಳುಮೆಣಸಿನಪುಡಿ ಸೇರಿಸಿ ಪ್ರತಿದಿನ ಬೆಳಿಗ್ಗೆ ಒಂದು ಲೋಟ ರಸವನ್ನು ಕುಡಿಯುತ್ತಾ ಬಂದರೆ, ದೈಹಿಕ ಶಕ್ತಿ ಹೆಚ್ಚಾಗುತ್ತದೆ. ನರದೌರ್ಬಲ್ಯ, ಉಬ್ಬಸ, ನೆಗಡಿ, ಅಪೌಷ್ಠಿಕತೆ, ಅಶಕ್ತತೆ ಇತ್ಯಾದಿ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರ.
೫. ಮಕ್ಕಳ ಆರೋಗ್ಯಕ್ಕೆ: ಮೇಲೆ ಹೇಳಿರುವ ರೀತಿ ತಯಾರಿಸಿದ ಸೊಪ್ಪಿನ ಕಷಾಯಕ್ಕೆ ಸಕ್ಕರೆ ಬೆರೆಸಿ, ಮಕ್ಕಳಿಗೆ ಕೊಟ್ಟರೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
೬. ಸ್ತ್ರೀಯರ ಆರೋಗ್ಯಕ್ಕೆ: ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ, ಹಾಲು ಉಣಿಸುವ ತಾಯಂದಿರಿಗೆ ಉತ್ತಮ ಆಹಾರ. ಈ ಸಾರನ್ನು ಎಲ್ಲರೂ ಉಪಯೋಗಿಸುವುದು ಒಳ್ಳೆಯದು.
೭. ತಲೆಸುತ್ತುವಿಕೆ: ನುಗ್ಗೆಸೊಪ್ಪನ್ನು ಬೇಯಿಸಿ ಬಸಿದ ರಸಕ್ಕೆ ನಿಂಬೆರಸ ಬೆರೆಸಿ ಒಂದು ವಾರದ ಕಾಲ ಬೆಳಿಗ್ಗೆ ಸೇವನೆ ಮಾಡಿದರೆ ತಲೆಸುತ್ತುವಿಕೆನಿವಾರಣೆಯಾಗುತ್ತದೆ.
೮. ಅರೆತಲೆನೋವು: ಒಂದೇ ಭಾಗದಲ್ಲಿ ತಲೆನೋಯುತ್ತಿದ್ದರೆ, ೪ – ೫ ತೊಟ್ಟು, ನುಗ್ಗೆಸೊಪ್ಪಿನ ರಸವನ್ನು ಬಲಪಾರ್ಶ್ವದಲ್ಲಿ ನೋವಿದ್ದರೆ, ಬಲಕಿವಿಗೂ, ಎಡಭಾಗದಲ್ಲಿ ನೋವಿದ್ದರೆ, ಎಡಕಿವಿಗೂ ದಿನಕ್ಕೆ ಮೂರು ಬಾರಿ ಹಾಕಿಕೊಂಡರೆ ತಲೆನೋವು ನಿವಾರಣೆಯಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧