ನೀವು ಯಾವ ಪಾರ್ಟಿ ಎಂದು ಕೇಳಿದ ಜಿ.ಪಂ. ಸಿ.ಇ.ಒಗೆ ಸಾರ್ವಜನಿಕರ ತರಾಟೆ

ಹನೂರು:ಏ.22: ತಾಲ್ಲೂಕಿನ ಹೂಗ್ಯಂ ಗ್ರಾ.ಪಂ.ಮಹಿಳಾ ಸದಸ್ಯರೊಬ್ಬರನ್ನು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ನೀವು ಯಾವ ಪಾರ್ಟಿ ಎಂದು ಕೇಳಿದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಸಾರ್ವಜನಿಕರು ಜಿ.ಪಂ.ಕಾರ್ಯಾ ನಿರ್ವಾಹಣಾಧಿಕಾರಿ ಹರ್ಷಲ್ ಗೋಯರ್ ನಾರಾಯಣ್‍ರಾವ್ ಅವರನ್ನು ತೀವ್ರವಾಗಿ ತರಾಟೆತೆಗೆದು ಕೊಂಡು ಅಕ್ಷರಶಃ ಹಿರಿಯ ಅಧಿಕಾರಿ ಪೇಚೆಗೆ ಸಿಲುಕುವಂತೆ ಮಾಡಿರುವ ವಿಲಕ್ಷಣ ಘಟನೆ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.
ಮಂಗಳವಾರ ಮನರೇಗಾ, ದಡಿ ಜಲಶಕ್ತಿ ಯೋಜನೆಯ ಕಾಮಗಾರಿಗಳ ಪರಿಶೀಲನೆ ಸಂಬಂಧ ಹನೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬೇಟಿ ನೀಡಿದ್ದು, ಹೂಗ್ಯಂ ಗ್ರಾಮಕ್ಕೆ ಬೇಟಿ ನೀಡಿದ ವೇಳೆ ಮಹಿಳಾ ಸದಸ್ಯರು ತಮ್ಮ ಅಹ್ವಾಲನ್ನು ಸಲ್ಲಿಸಿದ ವೇಳೆ ಜಿ.ಪಂ.ಕಾರ್ಯಾ ನಿರ್ವಾಹಣಾಧಿಕಾರಿಗಳು ನೀವು ಯಾವ ಪಕ್ಷಎಂದು ಕೇಳಿದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ನೀವು ಸದಸ್ಯರನ್ನು ಯಾವಪಾರ್ಟಿ ಎಂದು ಕೇಳಿತ್ತೀರಾ? ಒಬ್ಬ ಅಧಿಕಾರಿಯಾಗಿದ್ದು ಕೊಂಡು ಯಾವ ಪಾರ್ಟಿ ಎಂದು ಕೇಳುವುದು ಸರಿಯೇ ?ರಾಜಕೀಯ ಮಾಡುವುದಕ್ಕೆ ಬಂದಿದ್ದೀರಾ? ನೀವು ಕಾಂಗ್ರೇಸ್ ಪಾರ್ಟಿನಾ? ನಾವು ಬಿಜೆಪಿ! ಎಂದು ಹಿಗ್ಗಾಮುಗ್ಗಾ ಮಾತಿನಲ್ಲೇ ಜಾಡಿಸಿದರು.
ವಿಚಲಿತರಾದ ಕಾರ್ಯನಿರ್ವಾಹಣಾಧಿಕಾರಿಗಳು:
ಹಲವಾರು ಜನ ಒಮ್ಮೆಲೇ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ವಿಚಲಿತರಾದ ಸಿ.ಇ.ಒ.ಪಕ್ಕದಲ್ಲೇ ಇದ್ದ ಪಿಡಿಒ ಪುಷ್ಪಲತಾ ಅವರನ್ನು ಪ್ರಶ್ನೆ ಮಾಡುತ್ತಿರುವವರನ್ನು ಕಳುಹಿಸಿ ಎಂದು ಹೇಳಿ ಗಲಾಟೆ ಮಾಡುತ್ತಿರುವವರಿಂದ ದೂರ ಹೋಗಲು ಕಾರನ್ನು ಒಂದು ಸುತ್ತು ಸುತ್ತುತ್ತಿರುವುದು ವಿಡಿಯೋ ವೈರಲ್ ಆಗಿದೆ. ಈ ವೇಳೆ ಪಿಡಿಒ ಅವರು ಗ್ರಾಮಸ್ಥರನ್ನು ಸಮಧಾನಪಡಿಸಲು ಬಂದರು ಅವರ ಮಾತಿಗೂ ಬಗ್ಗಲಿಲ್ಲ. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಎಷ್ಟೇ ಸಮರ್ಥನೆ ನೀಡಲು ಪ್ರಯತ್ನಿಸಿದರು ಗ್ರಾಮಸ್ಥರುತಮ್ಮ ಪಟ್ಟನ್ನು ಸಡಿಸಲಿಲ್ಲ. ಈ ವೇಳೆ ಅಲ್ಲಿನ ಸ್ಥಳಿಯರೇ ಸಮಧಾನ ಪಡಿಸುತ್ತಿರುವುದು ಕಂಡು ಬಂದಿದೆ. ಕೊನೆಗೆ ಜಿ.ಪಂ.ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಕಾರನ್ನು ಹತ್ತಲು ಆಗದೇಜನತೆಯ ಆಕ್ರೋಶದಿಂದ ವಿಚಲಿತರಾಗಿ ವೇಗವಾಗಿ ಹೆಜ್ಜೆಹಿಡುತ್ತಿದ್ದದೃಶ್ಯ ವೈರಲ್‍ಆಗಿದೆ.ಎಷ್ಟೇ ದೊಡ್ಡ ಅಧಿಕಾರಿಯಾಗಿರಲಿ ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುವಾಗ ತಮ್ಮ ಮಾತಿನ ಮೇಲೆ ನಿಗಾ ಇರಬೇಕುಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿರುವುದು ಸುಳ್ಳಲ್ಲ.