ನೀಲೂರು ರಾಚೋಟೇಶ್ವರ ಹಿರೇಮಠಕ್ಕೆ ನೂತನ ಶ್ರೀಗಳ ನಿಯುಕ್ತಿ

ಕಲಬುರಗಿ:ಡಿ.3:ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಶ್ರೀಮದ್ರಂಭಾಪುರಿ ಶಾಖಾ ನೀಲೂರು ಶ್ರೀ ರಾಚೋಟೇಶ್ವರ ಹಿರೇಮಠಕ್ಕೆ ಪ್ರವಚನ ಪ್ರವೀಣ-ಪದವೀಧರರಾದ ತಿಳುಗೊಳ ಹಿರೇಮಠದ ಶಿವಬಸವ ಎಂಬ ವಟುವನ್ನು ಸಕಲ ಸದ್ಭಕ್ತರ ಸದಾಶಯದಂತೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ನಿಯುಕ್ತಿಗೊಳಿಸಿ ಶುಭ ಹಾರೈಸಿದರು.
ಶನಿವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಮುಂದಾಳತ್ವದಲ್ಲಿ ನೀಲೂರು ರಾಚೋಟೇಶ್ವರ ಹಿರೇಮಠದ ಶಿಷ್ಯ ಸದ್ಭಕ್ತರು ಆಗಮಿಸಿ ಲಿಂ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ನೂತನ ಶ್ರೀಗಳನ್ನು ನಿಯುಕ್ತಿಗೊಳಿಸಿ ಆಶೀರ್ವದಿಸಬೇಕೆಂಬ ಬೇಡಿಕೆಯನ್ನು ಮನ್ನಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಈ ನಿರ್ಧಾರ ಕೈಕೊಂಡರು.
ನೂತನ ಶ್ರೀಗಳು ಸಿಂದಗಿ ತಾಲೂಕಿನ ತಿಳುಗೊಳ ಗ್ರಾಮ ಹಿರೇಮಠದ ವೇ.ಮಲ್ಲಯ್ಯ-ಶ್ರೀಮತಿ ಶಿವಲಿಂಗಮ್ಮ ಇವರ ದ್ವಿತೀಯ ಸುಪುತ್ರರಾಗಿದ್ದು ಶಿವಬಸವ ನಾಮಾಂಕಿತ 45 ವಯಸ್ಸಿನ ವಟುವು ಪ್ರವಚನ ಪ್ರವೀಣರಾಗಿದ್ದು ಪದವೀಧರರಾಗಿದ್ದಾರೆ. ಕನ್ನಡ, ಹಿಂದಿ, ಮರಾಠಿ ಭಾಷೆಯಲ್ಲಿ ಪ್ರಬುದ್ಧತೆ ಸಂಪಾದಿಸಿಕೊಂಡು ಪ್ರವಚನ ಮಾಡುವ ಪ್ರಬುದ್ಧತೆಯನ್ನು ಹೊಂದಿದ್ದಾರೆ.
ನಿಯುಕ್ತಿಗೊಳಿಸಿದ ಸಮಾರಂಭದಲ್ಲಿ ಅಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಯಂಕಂಚಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ಮಳಲಿ ಮಠದ ಡಾ||ನಾಗಭೂಷಣ ಶಿವಾಚಾರ್ಯರು ಮತ್ತು ಅಗರಖೇಡದ ಪ್ರಭುಲಿಂಗ ಶ್ರೀಗಳು ನೀಲೂರು ಗ್ರಾಮದ ಹನಮಂತರಾಯಗೌಡ ಪಾಟೀಲ, ಶ್ರೀಮಂತರಾಯಗೌಡ ಪಾಟೀಲ, ಗುರುನಾಥ ಕೌಲಗಿ, ಶಾಂತಯ್ಯಸ್ವಾಮಿ ಮಠಪತಿ, ರಾಜಶೇಖರ ಪಾಟೀಲ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಮುಂಬರುವ ಶುಭ ಮುಹೂರ್ತದಲ್ಲಿ ನೂತನ ಶ್ರೀಗಳವರಿಗೆ ಅಧಿಕೃತವಾಗಿ ಶ್ರೀ ಗುರು ಪಟ್ಟಾಧಿಕಾರ ನೆರವೇರಿಸಲಾಗುವುದೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಕಟಿಸಿದರು.