ನೀಲಾಂಬಿಕೆ ಮೊಬೈಲ್‌ಗೆ ಶೋಧ


ಬೆಂಗಳೂರು,ನ.೨- ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಸಂಬಂಧ ಆರೋಪಿ ನೀಲಾಂಬಿಕೆ ವಿಡಿಯೋ ರೆಕಾರ್ಡ್ ಮಾಡಿದ್ದ ಮೊಬೈಲ್ ಪತ್ತೆಗೆ ರಾಮನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಮೃತ್ಯುಂಜಯಶ್ರೀ, ಮಹ ದೇವಯ್ಯಗೆ ವಿಡಿಯೋ ಕಳುಹಿಸಿದ್ದ ನೀಲಾಂಬಿಕೆ ನಂತರ ಮೊಬೈಲ್ ನಾಶಪಡಿಸಿ, ಮತ್ತೊಂದು ಮೊಬೈಲ್ ಖರೀದಿಸಿದ್ದಳು.
ನೀಲಾಂಬಿಕೆಯ ಹಳೆಯ ಮೊಬೈ ಲ್‌ಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದು ವರಿಸಿದ್ದಾರೆ
ಈ ನಡುವೆ ಬಂಧಿತ ಮೂವರು ಆರೋಪಿಗಳನ್ನೂ ಎರಡು ದಿನಗಳಿಂದ ನಿರಂತರ ವಿಚಾರಣೆಗೆ ಒಳಪಡಿಸಿದರೂ ಪೊಲೀಸರಿಗೆ ಪ್ರಕರಣದ ಸಂಬಂಧ ಹೆಚ್ಚಿನ ಲಭ್ಯವಾಗಿಲ್ಲ. ಹಾಗಾಗಿ ರಾಮನಗರ ಎಸ್. ಪಿ. ಸಂತೋಷ್ ಬಾಬು ಸ್ವತಃ ಇಂದು ಆರೋಪಿಗಳ ವಿಚಾರಣೆ ನಡೆಸಿದರೂ ಹೆಚ್ಚೇನೂ ಪ್ರಯೋಜನವಾಗಲಿಲ್ಲ.
ಬಸವಲಿಂಗ ಸ್ವಾಮೀಜಿ ಬ್ಲಾಕ್‌ಮೇಲ್ ಪ್ರಕರಣದಲ್ಲಿ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ (ಎ೧), ನೀಲಾಂಬಿಕೆ (ಎ೨) ಮತ್ತು ನಿವೃತ್ತ ಶಿಕ್ಷಕ ಮಹದೇವಯ್ಯ (ಎ೩) ಪ್ರಮುಖ ಆರೋಪಿಗಳಾಗಿದ್ದಾರೆ.
ಆರೋಪಿಗಳು ಬಾಯ್ಬಿಡದ ಹಿನ್ನೆಲೆಯಲ್ಲಿ ತಾಂತ್ರಿಕ ಪುರಾವೆಗಳ ಮೇಲೆ (ಟೆಕ್ನಿಕಲ್ ಎವಿಡೆನ್ಸ್) ಪೊಲೀಸರು ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೊಗಳನ್ನೇ ಆಧಾರವಾಗಿ ಇರಿಸಿಕೊಂಡು ಅದನ್ನು ರೆಕಾರ್ಡ್ ಮಾಡಿರುವ ಮೂಲ ಮೊಬೈಲ್ ಹುಡುಕಲು ಪೊಲೀಸರು ಮುಂದಾಗಿದ್ದಾರೆ.
ಮೂವರೂ ಆರೋಪಿಗಳ ಮೊಬೈಲ್ ಪರಿಶೀಲನೆ ಮಾಡಿದರೂ ಅಗತ್ಯ ಮಾಹಿತಿ ಅಥವಾ ದತ್ತಾಂಶಗಳು ಪೊಲೀಸರಿಗೆ ಸಿಕ್ಕಿಲ್ಲ. ಒಂದು ವೇಳೆ ಪೊಲೀಸರಿಗೆ ವಿಡಿಯೊ ರೆಕಾರ್ಡ್ ಮಾಡಿರುವ ಮೊಬೈಲ್ ಸಿಕ್ಕರೆ ಪ್ರಕರಣದಲ್ಲಿ ಅದು ಮುಖ್ಯ ಪುರಾವೆಯಾಗುತ್ತದೆ. ಆದರೆ ಅದನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಆರೋಪಿಗಳ ಮೊಬೈಲ್‌ಗಳ ಪೊಲೀಸರ ಕೈಗೆ ಬರುವ ಹೊತ್ತಿಗೆ ಅವುಗಳಲ್ಲಿದ್ದ ಬಹುತೇಕ ಎಲ್ಲ ಮಾಹಿತಿ ಡಿಲೀಟ್ ಆಗಿದೆ. ವಾಟ್ಸಾಪ್ ಚಾಟ್‌ಗಳನ್ನೂ ಕ್ಲಿಯರ್ ಮಾಡಲಾಗಿದೆ. ಈ ಮೊಬೈಲ್‌ಗಳನ್ನು ವಿಧಿವಿಜ್ಞಾನ ಕೇಂದ್ರಕ್ಕೆ (ಎಫ್‌ಎಸ್‌ಎಲ್) ಕಳುಹಿಸಲು ಮಾಗಡಿ ಪೊಲೀಸರು ನಿರ್ಧರಿಸಿದ್ದಾರೆ.
ಈಗಾಗಲೇ ಆರು ತಿಂಗಳ ಸಿಡಿಆರ್ ಮತ್ತು ಮೆಸೇಜ್‌ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ವ್ಯಾಟ್ಸಪ್ ಚಾಟ್ ಮಾಹಿತಿಗಾಗಿ ಎಫ್‌ಎಸ್‌ಎಲ್ ಕಚೇರಿಗೆ ಮೊಬೈಲ್ ರವಾನಿಸಲಾಗಿದೆ. ಈ ವಿಡಿಯೋ ಯಾರಿಗೆಲ್ಲಾ ಶೇರ್ ಆಗಿದೆ ಮತ್ತು ಹಣಕ್ಕೆ ಇವರು ಬೇಡಿಕೆಯಿಟ್ಟಿದ್ದರೇ ಎಂಬ ಆಯಾಮದ ಬಗ್ಗೆಯೂ ಪೊಲೀಸರು ಗಮನ ಹರಿಸುತ್ತಿದ್ದಾರೆ.
ಹೇಳಿಕೆ ದಾಖಲು:
ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಶೈವ ಸಮಾಜದ ಮುಖಂಡ ಸಚ್ಚಿದಾನಂದ ಮೂರ್ತಿ ತಮ್ಮ ಹೇಳಿಕೆ ದಾಖಲಿಸಿದರು. ವಿಚಾರಣೆಗೆ ಹಾಜರಾಗುವಂತೆ ಅ ೨೮ರಂದು ಮಾಗಡಿ ಪೊಲೀಸರು ಸೂಚಿಸಿದ್ದರು. ಬಂಡೇಮಠದ ಸ್ವಾಮೀಜಿ ತಮ್ಮ ಡೆತ್‌ನೋಟ್‌ನಲ್ಲಿ ಸಚ್ಚಿದಾನಂದ ಮೂರ್ತಿ ಹೆಸರು ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹೇಳಿಕೆ ದಾಖಲಿಸಲು ನಿರ್ಧರಿಸಿದ್ದರು. ಕೆಲವು ಸಿಡಿಗಳ ಕುರಿತು ಸಚ್ಚಿದಾನಂದ ಮೂರ್ತಿ ಸ್ವಾಮೀಜಿ ಗಮನಕ್ಕೆ ತಂದಿದ್ದರು. ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಈ ಅಂಶವನ್ನೂ ಸಚ್ಚಿದಾನಂದ ಮೂರ್ತಿ ಪ್ರಸ್ತಾಪಿಸಿದ್ದಾರೆ.