ನೀರು ಹರಿಸಲು ಒತ್ತಾಯಿಸಿ ರೈತರಿಂದ ಧರಣಿ

ಹಿರಿಯೂರು.ಜ.8: ತಾಲ್ಲೂಕಿನ ಜೀವನಾಡಿ ವಿವಿ ಸಾಗರ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತಗೊಳಿಸಿದ್ದು ತಕ್ಷಣವೇ ಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲ್ಲೂಕು ಕಛೇರಿ ಬಳಿ ಧರಣಿ ನಡೆಸಿದರು ನಂತರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಅರ್ಪಿಸಿದರು. ಮಾರ್ಚ್ 31ರವರೆಗೂ ನೀರು ಹರಿಸಬೇಕಿತ್ತು ಆದರೆ ಏಕಾಏಕಿ ನಿಲ್ಲಿಸಲಾಗಿದೆ ಕಳೆದ ವರ್ಷ ವೇದಾವತಿ ನದಿ ಪಾತ್ರದ ಮೂಲಕ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಪ್ರದೇಶಗಳಿಗೆ ನಿಗದಿಯಾಗಿದ್ದ 0.25 ಟಿಎಂಸಿ ನೀರು ಹರಿಸಲು ಆದೇಶ ಮಾಡಿ ಸುಮಾರು 2.25 ಟಿಎಂಸಿ ನೀರು ಹರಿಸಲಾಯಿತು. ಆ ವೇಳೆ ನೀರು ತಡೆದ ಅಚ್ಚುಕಟ್ಟು ಭಾಗದ ರೈತರಿಗೆ ಸಂಸದರು, ಉಸ್ತುವಾರಿ ಸಚಿವರು ಹಾಗೂ ಚಳ್ಳಕೆರೆ ಶಾಸಕರು ಮುಂದಿನ ವರ್ಷ ವಿವಿಸಾಗರಕ್ಕೆ 10 ಟಿ ಎಂ ಸಿ ನೀರು ಹರಸುವುದಾಗಿ ಭರವಸೆ ನೀಡಿದ್ದರು  ಅಲ್ಲದೇ ಕಳೆದ ಸೆಪ್ಟೆಂಬರ್ 6 ರಂದು ನೀರು ಹರಿಸಲು ಚಾಲನೆ ನೀಡಿದ ಸಂಸದರು ಸಹಾ 10 ಟಿಎಂಸಿ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ನೀರು ಸ್ಥಗಿತಗೊಳಿಸಿದ್ದರೂ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು. ಸ್ಥಳಕ್ಕೆ ತಹಶೀಲ್ದಾರ್  ಜಿ.ಹೆಚ್.ಸತ್ಯನಾರಾಯಣ್ ಹಾಗೂ ವೃತ್ತ ನಿರೀಕ್ಷಕ ರಾಘವೇಂದ್ರ ಭೇಟಿ ನೀಡಿ ರೈತರ ಜೊತೆ ಮಾತುಕತೆ ನಡೆಸಿದರು ಈ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂಬ ಭರವಸೆ ಮೇಲೆ ರೈತರು ಧರಣಿ ಕೈಬಿಟ್ಟರು.