ನೀರು ಸರಬರಾಜು ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಹುಬ್ಬಳ್ಳಿ,ಮೇ25: ಹುಬ್ಬಳ್ಳಿ-ಧಾರವಾಡ ನೀರು ಸರಬರಾಜು ವಿಭಾಗದ ನೌಕರರನ್ನು ಮರು ನೇಮಕ ಮಾಡಿಕೊಳ್ಳುವುದು ಹಾಗೂ 4 ತಿಂಗಳ ವೇತನವನ್ನು ಪಾವತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹು-ಧಾ ಮಹಾನಗರ ಸಭೆಯ ನೀರು ಸರಬರಾಜು ವಿಭಾಗದ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮುಕ್ಕಲ್ ಮಾತನಾಡಿ, ಕಳೆದ 15-20 ವರ್ಷಗಳಿಂದ ನಾವು ಅವಳಿ ನಗರಗಳಿಗೆ ಯಾವುದೇ ಕುಡಿಯುವ ನೀರಿನ ತೊಂದರೆಯಾಗದಂತೆ ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಾ ಬಂದಿದ್ದು, ಹು-ಧಾ ನೀರು ಸರಬರಾಜು ವ್ಯವಸ್ಥೆಯನ್ನು ಜಲಮಂಡಳಿಯಿಂದ ಮಹಾನಗರ ಪಾಲಿಕೆ ಮುಖಾಂತರ ಎಲ್ ಆ್ಯಂಡ್ ಟಿ ಅವರಿಗೆ ಹಸ್ತಾಂತರಿಸಲಾಗಿದೆ.
ಆದರೇ ಡಿಸೆಂಬರ್ 6, 2022 ರಂದು ಹುಧಾ ಆಯುಕ್ತರು ಮೌಖಿಕ ಆದೇಶವನ್ನು ಹೊರಡಿಸಿ ಸೇವಾ ನಿರತ ನೌಕರರನ್ನು ವಜಾಗೊಳಿಸಿದ್ದಾರೆ. ಈ ವಿಷಯವಾಗಿ ಧಾರವಾಡ ಮಹಾನಗರ ಪಾಲಿಕೆ ಕಛೇರಿ ಎದುರು 30 ದಿವಸ ಉಪವಾಸ ಸತ್ಯಾಗ್ರಹ ಮಾಡಿದ ಪ್ರತಿಫಲವಾಗಿ 7 ತಿಂಗಳ ವೇತನದಲ್ಲಿ ಕೇವಲ 3 ತಿಂಗಳು ವೇತನ ನೀಡಿ, ಇನ್ನುಳಿದ 4 ತಿಂಗಳ ವೇತನವನ್ನು ನೀಡದೆ ಹಾಗೂ ಮರುನೇಮಕಾತಿ ಮಾಡದೇ ಇರುವುದು ನಮಗೆ ಅಸಮಾಧಾನ ತಂದಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಸಭೆ ಮಾಡಿ ಹು-ಧಾ ನಗರಕ್ಕೆ ಸಮರ್ಪಕವಾಗಿ ನೀರು ಸರಬರಾಜು ಮಾಡುವುದು ಹಾಗೂ ಮೂರು ದಿನಗಳಲ್ಲಿ ಹಳೆಯ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರೂ ಸಹಿತ ಇದುವರೆಗೂ ಮರು ನೇಮಕ ಮಾಡಿಕೊಂಡಿಲ್ಲ. ಈ ನಿಟ್ಟಿನಲ್ಲಿ ಎಲ್ ಆ್ಯಂಡ್ ಟಿ ಯವರು ಹಳೆಯ ನೌಕರರನ್ನು ಮರು ನೇಮಕಾತಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಮೇಶ ಲಮಾಣಿ, ಮಹಾಂತೇಶ ಗೌಡರ, ಆನಂದ ಕಾಳಮ್ಮವರ, ಕೋದಂಡರಾಮ ಅನಂತಪುರ ಉಪಸ್ಥಿತರಿದ್ದರು.