ನೀರು ಸರಬರಾಜು ಕೇಂದ್ರಕ್ಕೆ ಮೇಯರ್ ಭೇಟಿ

ದಾವಣಗೆರೆ.ಜೂ.೨೫;  ಮೇಯರ್ ವಿನಾಯಕ ಬಿ ಹೆಚ್ ಅವರು ನೀರು ಸರಬರಾಜು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೇಯರ್ ಅವರೊಂದಿಗೆ ಪಾಲಿಕೆ ಸದಸ್ಯರು, ಆಯುಕ್ತರು ಹಾಗೂ ಅಧಿಕಾರಿಗಳು  ರಾಜನಹಳ್ಳಿಯ ತುಂಗಭದ್ರಾ ನದಿಯ ಬಳಿಯ ಪಾಲಿಕೆಯ ನೀರು ಸರಬರಾಜು ಜಾಕ್‌ವೆಲ್‌ಗೆ ಭೇಟಿ ನೀಡಿ ನದಿಯಲ್ಲಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ನದಿಯ ಪಾತ್ರದಲ್ಲಿ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಹರಿವು ಇರುತ್ತದೆ. ಸದ್ಯಕ್ಕೆ ನದಿಯಲ್ಲಿ ನೀರಿನ ಹರಿವು ಇರುವುದರಿಂದ ನಗರಕ್ಕೆ ನೀರಿನ ಕೊರತೆ ಉಲ್ಭಣಿಸದಿರುವುದು ಕಂಡುಬಂದಿತು.  ತದನಂತರದಲ್ಲಿ ಪಾಲಿಕೆಯ ಟಿ ವಿ ಸ್ಟೇಷನ್ ಕೆರೆಗೆ ಭೇಟಿ ನೀಡಿ ಕೆರೆಯಲ್ಲಿನ ನೀರಿನ ಲಭ್ಯತೆಯನ್ನು ಪರಿಶೀಲಿಸಿದರು. ಸದ್ಯ ಕೆರೆಯಲ್ಲಿ ೨ ತಿಂಗಳಿಗಾಗುವಷ್ಟು ನೀರಿನ ಸಂಗ್ರಹಣೆ ಇದ್ದು ದಾವಣಗೆರೆ ನಗರಕ್ಕೆ ನೀರಿನ ಕೊರತೆ ಉಂಟಾಗದೇ ಇರುವ ರೀತಿಯಲ್ಲಿ ಸಮರ್ಪಕವಾಗಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಪಾಲಿಕೆ ಸದಸ್ಯರಾದ ಎ ನಾಗರಾಜ್, ಮಂಜುನಾಥ ಗಡಿಗುಡಾಳ್, ನಾಗರಾಜು ಹಾಗೂ ಮುಖಂಡರಾದ ಹುಲ್ಮನಿ ಗಣೇಶ್, ಜಗದೀಶ್, ಗುರುರಾಜ್, ಗೋಪಿ ನಾಯ್ಕ್ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಉದಯ್‌ಕುಮಾರ್ ಹಾಗೂ ಇತರರು ಹಾಜರಿದ್ದರು.