ನೀರು ಶುದ್ಧೀಕರಣ ಘಟಕಕ್ಕೆ ಮೇಯರ್ ಭೇಟಿ, ಪರಿಶೀಲನೆ


ಮಂಗಳೂರು, ಮೇ ೨೭- ಮಂಗಳೂರಿಗೆ ನೀರು ಪೂರೈಕೆಯಾಗುತ್ತಿರುವ ತುಂಬೆಯ ನೀರು ಶುದ್ಧೀಕರಣ ಘಟಕಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಮಂಗಳಾದೇವಿ, ಜಪ್ಪಿನಮೊಗರು,ಕಣ್ಣೂರು, ಜಲ್ಲಿಗುಡ್ಡೆ, ಫೈಸಲ್ನಗರ, ಎಕ್ಕೂರು, ಪಾಂಡೇಶ್ವರ, ಅಶೋಕನಗರ, ಶಕ್ತಿನಗರ, ಅಳಪೆ, ಕುಡುಪು, ಕೋಡಿಕಲ್, ಉರ್ವ, ಕುಂಜತ್ತಬೈಲ್, ಮರಕಡ, ಮೋರ್ಗನ್ಸ್‌ಗೇಟ್ ಮತ್ತಿತರ ಪ್ರದೇಶಗಳಿಗೆ ಕೆಲವು ದಿನಗಳಿಂದ ಮಣ್ಣು ಮಿಶ್ರಿತ ನೀರು ಬರುವುದನ್ನು ಗಮನಿಸಿದ ಮೇಯರ್ ಅಧಿಕಾರಿಗಳೊಂದಿಗೆ ತುಂಬೆ ಅಣೆಕಟ್ಟು ಬಳಿಯಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದರು. ಪ್ರಸ್ತುತ ತುಂಬೆ ನೀರು ಶುದ್ಧೀಕರಣ ಘಟಕದಲ್ಲಿ ಅಮೃತ್ ಯೋಜನೆಯಡಿ ಕೆಯುಐಡಿಎಫ್‌ಸಿ ವತಿಯಿಂದ ಕಾಮಗಾರಿಗಳು ಪ್ರಗತಿಯಲ್ಲಿದೆ. ನೀರು ಶುದ್ಧೀಕರಣ ಘಟದಲ್ಲಿರುವ ೪ ಟ್ಯೂಬ್ ಸೆಟ್ಲರ್ ಚೇಂಬರ್‌ಗಳಲ್ಲಿ ೩ ಟ್ಯೂಬ್ ಸೆಟ್ಲರ್ ಚೇಂಬರ್ ಪೂರ್ಣಗೊಂಡಿದೆ. ೪ನೇ ಟ್ಯೂಬ್ ಸೆಟ್ಲರ್ ಚೇಂಬರ್‌ಗೆ ಅಗತ್ಯವಿರುವ ಟ್ಯೂಬ್ಗಳು ಮಹಾರಾಷ್ಟ್ರದಿಂದ ಬರಬೇಕಾಗಿರುತ್ತದೆ. ಪ್ರಸ್ತುತ ಲಾಕ್‌ಡೌನ್ ಕಾರಣದಿಂದ ಟ್ಯೂಬ್ಗಳನ್ನು ತರಿಸುವುದಕ್ಕೆ ಅಡಚಣೆಯುಂಟಾಗಿದೆ. ಇದರಿಂದ ಈ ಪ್ರದೇಶದ ಸಾರ್ವಜನಿಕರಿಗೆ ಮಣ್ಣು ಮಿಶ್ರಿತ ನೀರು ಸರಬರಾಜು ಆಗುತ್ತಿದೆ. ಇದರ ದುರಸ್ತಿಗೆ ಇನ್ನೊಂದು ವಾರದ ಕಾಲಾವಕಾಶಬೇಕು ಎಂದು ಗುತ್ತಿಗೆದಾರರು ಕೇಳಿಕೊಂಡರು. ಸದ್ಯ ತಾತ್ಕಾಲಿಕವಾಗಿ ಹಳೆಯ ಟ್ಯೂಬ್‌ಗಳನ್ನು ಅಳವಡಿಸಿ ಶುದ್ಧ ನೀರನ್ನು ಪೂರೈಸಲು ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಮೇಯರ್ ಸೂಚಿಸಿದರು. ಈ ಸಂದರ್ಭ ಮಾಜಿ ಮೇಯರ್ ಭಾಸ್ಕರ್ ಕೆ., ಕಾರ್ಪೊರೇಟರ್‌ಗಳಾದ ಚಂದ್ರಾವತಿ, ಕಿಶೋರ್ ಕೊಟ್ಟಾರಿ, ಮನಪಾ ಮತ್ತು ಕುಡ್ಸೆಂಪ್ ಅಧಿಕಾರಿಗಳು ಉಪಸ್ಥಿತರಿದ್ದರು.