ನೀರು-ಮೇವು ಕೊರತೆಯಾಗದಿರಲಿ

ಚನ್ನಮ್ಮನ ಕಿತ್ತೂರ, ನ23: ಈ ವರ್ಷ ಮಳೆ ಕಡಿಮೆಯಾಗಿ ಕೊಳವೆ ಬಾವಿ ಹಾಗೂ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ತಹಶೀಲ್ದಾರ ಕಛೇರಿಯಲ್ಲಿ ಬರಗಾಲ ಪಡೆಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ಬರ ನಿರ್ವಹಣೆ ಮಾಡಬೇಕು ಎಲ್ಲರೂ ಒಗ್ಗಟ್ಟಿನಿಂದ ಈ ಸಮಸ್ಯೆ ಬಗೆಹರಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕಾಗಿದೆ ಅದಕ್ಕಾಗಿ ಕ್ಷೇತ್ರಾದ್ಯಂತ ಜಲಜೀವನ ಮಶಿನ್ ಯೋಜನೆ ಕಾಮಗಾರಿಗಳು ಪೂರ್ಣವಾಗಿದೆಯೋ ಅಥವಾ ಕಳಪೆಯಾಗಿದೆ ಎಂದು ಪರಿಶೀಲಿಸಿ ಪಿಡಿಓಗಳು ವರ್ಕಆರ್ಡರ್‍ನಲ್ಲಿ ಇದ್ದಂತೆ ಕಾಮಗಾರಿ ಆಗಿದೆಯೋ ಎಂಬುವುದನ್ನು ಖಾತರಿ ಮಾಡಿಕೊಂಡು ಆ ಕಾಮಗಾರಿಗಳನ್ನು ಹಸ್ತಾಂತರಿಸಿಕೊಳ್ಳಬೇಕು. ನೀರಿನ ಸಮಸ್ಯೆ ಸಂಬಂಧಿಸಿದಂತೆ ಟಾಸ್ಕ ಪೋರ್ಸ ಸಭೆಯನ್ನು ಪರಿಶೀಲಿಸಿ ಸೂಕ್ಷ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ ರವೀಂದ್ರ ಹಾದಿಮನಿ ಮಾತನಾಡಿ ತಾಲೂಕಿನ ಜನತೆಗೆ ಯಾವುದೇ ತರಹದ ಸಮಸ್ಯೆ ಬರದಂತೆ ಪಿಡಿಓಗಳು, ಗ್ರಾಮಲೆಕ್ಕಾಧಿಕಾರಿಗಳು ನೋಡಿಕೊಳ್ಳಬೇಕು ಅಂತಹದ್ದೇನಾದರೂ ಕಂಡುಬಂದಲ್ಲಿ ಮೇಲಧಿಕಾರಿ ಗಮನ ಸೆಳೆದು ಸಮಸ್ಯೆ ಪರಿಹರಿಸಿಕೊಳ್ಳಬೇಕು. ಇದೇ ವೇಳೆ ಪಿಡಿಓಗಳು ತಮ್ಮ-ತಮ್ಮ ಗ್ರಾ.ಪಂ. ವ್ಯಾಪ್ತಿಯ ಕೊಳವೆ ಬಾವಿಗೆ ಆಗುವ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ತಿಳಿಸಿದರು. ಇನ್ನೊಂದಿಷ್ಟು ಕೊಳವೆ ಬಾವಿಗಳನ್ನು ಕೊರೆಸಿದರೆ ನೀರಿನ ಕೊರತೆ ಬಗೆಹರೆಯುವುದೆಂದು ತಿಳಿಸಿದರು.
ಈ ವೇಳೆ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ (ಐಎಎಸ್) ಶುಭಂ ಶುಕ್ಲಾಚಾರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಬಾಸ್ ಸಂಪಗಾಂವಿ, ಪಿಡಿಓಗಳು, ಪ.ಪಂ. ಅಧಿಕಾರಿ, ಗ್ರಾಮ ಲೆಕ್ಕಿಗರು ಸೇರಿದಂತೆ ತಾಲೂಕಿನ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.