ನೀರು ಬಳಕೆದಾರರ ಸಹಕಾರ ಸಂಘಗಳ ಪುನಶ್ಚೇತನ ಕಾರ್ಯಾಗಾರ

ಕಲಬುರಗಿ.ಜ.11:ಜಲ ಮತ್ತು ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕೃಷಿ ಮಹಾ ವಿದ್ಯಾಲಯ, ಕಲಬುರ್ಗಿ, ನೀರಾವರಿ ಯೋಜನೆಗಳ ವಲಯ, ಕಲಬುರ್ಗಿ
ಹಾಗೂ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಐಪಿಝಡ್, ಕಲಬುರ್ಗಿ ಇವರ ಸಹಯೋಗದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಪುನಶ್ಚೇತನ ಕಾರ್ಯಾಗಾರ ನಡೆಯಿತು.
ಶ್ರೀ ದತ್ತಾತ್ರೇಯ ಸಿ. ಪಾಟೀಲ ರೇವೂರ, ಮಾನ್ಯ ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರ್ಗಿ ಇವರು ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಕೃಷ್ಣಾದಿಂದ ಕಾರಂಜಾವರೆಗೆ ಯೋಜಿಸಲಾಗಿರುವ ಬಾಕಿ ಇರುವ ಎಲ್ಲ ಯೋಜನೆಗಳ ಡಿ.ಪಿ.ಆರ್ ತಯಾರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ನೀರಾವರಿ ಯೋಜನಾ ವಲಯಗಳ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ರಾಜ್ಯದ ಜಲ ಸಂಪನ್ಮೂಲ ನಿರ್ವಹಣೆ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಒಂದು ದೊಡ್ಡ ಸವಾಲಾಗಿದೆ. ಜಲ ಸಂಪನ್ಮೂಲ ಇಲಾಖೆಯು ವಿಶೇಷವಾಗಿ ವಾಲ್ಮಿ ಸಂಸ್ಥೆ ಮೂಲಕ ನೀರು ಬಳಕೆದಾರರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಈ ನಿಟ್ಟಿನಲ್ಲಿ ವಾಲ್ಮಿ ಮತ್ತು ಕಾಡಾ ಸಂಸ್ಥೆಗಳು ನಡೆಸುತ್ತಿರುವ ನೀರಾವರಿಗೆ ಸಂಬಂಧಪಟ್ಟ ಯಾವುದೇ ಬೇಡಿಕೆ ಇದ್ದರೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪೂರೈಸಲಾಗುವುದು. ನೀರಿನ ಸದ್ಭಳಕೆ ಬಗ್ಗೆ ನೀರು ಬಳಕೆದಾರರ ಸಹಕಾರ ಸಂಘಗಳ ಪುನಶ್ಚೇತನ ಅತ್ಯವಶ್ಯಕವಾಗಿದೆ ಎಂದರು.
ಶ್ರೀ ಶರಣಪ್ಪ ತಳವಾರ, ಅಧ್ಯಕ್ಷರು, ಕೃಷ್ಣಾ ಕಾಡಾ, ಭೀಮರಾಯನಗುಡಿ ಇವರು ಮಾತನಾಡಿ ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಜಲ ಕ್ಷಾಮ ಎದುರಿಸಲು ನೀರಿನ ಸದ್ಭಳಕೆ ಅತ್ಯಂತ ಮುಖ್ಯವಾಗಿದೆ ಮತ್ತು ಈ ದಿಸೆಯಲ್ಲಿ ಕಾಡಾ ಮತ್ತು ವಾಲ್ಮಿಗಳ ಪಾತ್ರ ಅತ್ಯಂತ ಮುಖ್ಯವಾಗಿದೆ ಅಣೆಕಟ್ಟುಗಳಿಂದ ಹರಿದು ಬರುವ ನೀರನ್ನು ಕ್ಷೇತ್ರ ಮಟ್ಟದಲ್ಲಿ ನಿರ್ವಹಣೆ ಮಾಡುವಲ್ಲಿ ಕಾಡಾ ಪಾತ್ರ ಬಹು ಮುಖ್ಯವಾಗಿದೆ. ಅದೇ ರೀತಿ ರೈತರ ಸಹಭಾಗಿತ್ವ ಪದ್ಧತಿಯನ್ನು ಯಶಸ್ವಿಗೊಳಿಸಲು ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಬಹು ಮುಖ್ಯವಾಗಿದೆ ಎಂದರು. ಕೇವಲ ಸರ್ಕಾರದ ಮೇಲೆ ಅವಲಂಬಿತರಾಗದೇ ರೈತರು ಸ್ವಾವಲಂಬನೆ ಮತ್ತು ಸಹಕಾರದ ಮೂಲಕ ನೀರಾವರಿ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದರು. ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಸರ್ಕಾರದ ಎಲ್ಲ ಸೌಲತ್ತುಗಳನ್ನು ಒದಗಿಸಿ ಕೊಡುವಲ್ಲಿ ಮತ್ತು ತಿಳುವಳಿಕೆ ಮೂಡಿಸಲು ಅಧಿಕಾರಿಗಳು ಮುಂದಾಗಬೇಕೆಂದರು.
ಡಾ. ರಾಜೇಂದ್ರ ಪೋದ್ದಾರ, ನಿರ್ದೇಶಕರು, ವಾಲ್ಮಿ, ಧಾರವಾಡ ಇವರು ಮಾತನಾಡುತ್ತಾ ಜಲ ಸಂಕಷ್ಟದಿಂದ ಮುಂಬರುವ ದಿನಗಳಲ್ಲಿ ಜಾಗತಿಕ ಕಲಹಗಳು ಉಂಟಾಗುವ ಸಾಧ್ಯತೆಗಳಿವೆ ಎಂದರು. ಈ ಕಲಹಗಳಿಗೆ ಸ್ಥಿರ ಪ್ರಮಾಣದ ನೀರಿನ ಸರಬರಾಜು ಮತ್ತು ವೇಗದಲ್ಲಿ ಬೆಳೆಯುತ್ತಿರುವ ನೀರಿನ ಬೇಡಿಕೆ ಇವುಗಳ ನಡುವಿನ ಕಂದಕವೇ ಕಾರಣ ಎಂದರು. ಒಟ್ಟಾರೆ ನೀರಿನ ಬಳಕೆಯಲ್ಲಿ ಕೃಷಿಯ ಪಾಲು ಶೇಕಡಾ 80 ರಷ್ಟಾಗಿದೆ. ಅದರಲ್ಲೂ ನೀರಾವರಿಯಲ್ಲಿ ಸುಮಾರು 70 ಪ್ರತಿಶತ ನೀರು ಅಪವ್ಯಯವಾಗುತ್ತಿರುವುದು ವಿಶಾದಕರ ಸಂಗತಿಯಾಗಿದೆ ಎಂದರು. ಈ ಸಮಸ್ಯೆಗೆ ಪರಿಹಾರವಾಗಿ ಕರ್ನಾಟಕ ರಾಜ್ಯ ಸರ್ಕಾರವು 2000 ಇಸ್ವಿಯಲ್ಲಿ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿಯನ್ನು ಅನುಷ್ಠಾನಗೊಳಿಸಿದೆ. ಇದಕ್ಕಾಗಿ 1965ರ ನೀರಾವರಿ ಕಾಯ್ದೆ ಹಾಗೂ 1959 ರ ಸಹಕಾರಿ ಕಾಯ್ದೆ ಇವುಗಳ ಅಡಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚಿಸಲು ಅವಕಾಶ ಮಾಡಿ ಕೊಡಲಾಗಿದೆ.
ಎರಡು ದಶಕಗಳು ಕಳೆದರೂ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿಯ ಕುರಿತು ಸೂಕ್ತ ತಿಳುವಳಿಕೆ ಕೊರತೆಯಿಂದಾಗಿ ಸಂಘಗಳು ನಿರೀಕ್ಷಿತ ಮಟ್ಟದ ಸಾಧನೆ ಮಾಡಲಾಗಿಲ್ಲ. ಆ ಕಾರಣಕ್ಕಾಗಿ ನಮಗಿಂದು ನೀರು ಬಳಕೆದಾರರ ಸಹಕಾರ ಸಂಘಗಳ ಪುನಶ್ಚೇತನ ಅವಶ್ಯಕವಾಗಿದೆ ಎಂದರು. ಸರ್ಕಾರವು ಕೂಡಾ ಸಂಘಗಳಿಗೆ ಅನೇಕ ಸೌಲತ್ತುಗಳನ್ನು ಒದಗಿಸುತ್ತಿದೆ ರೈತ ಸಮುದಾಯ ಇದರ ಲಾಭ ಪಡೆದುಕೊಳ್ಳಬೇಕೆಂದರು.
ಶ್ರೀ ಸುರೇಶ ಕುಲಕರ್ಣಿ, ಸಮಾಲೋಚಕರು, ವಾಲ್ಮಿ, ಧಾರವಾಡ ಇವರು ಸಂಘಗಳ ಸ್ವರೂಪ, ರಚನೆ, ಕಾರ್ಯವೈಖರಿಗಳ ಬಗ್ಗೆ ಉಪನ್ಯಾಸ ನೀಡಿದರು. ಐ.ಪಿ.ಝಡ್, ಬೆಣ್ಣೆತೋರಾ, ಚುಳಕಿನಾಲಾ ಮತ್ತು ಕಾರಂಜಾ ಯೋಜನೆಗಳ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಮಸ್ತಾನ್‍ಸಾಬ ಇ. ಕೊರವಿ, ಅಧ್ಯಕ್ಷರು, ನೀ.ಬ.ಸ.ಸಂಘ ಬೆಣ್ಣೆತೋರಾ ಯೋಜನೆ, ಶ್ರೀ ಹನಮಂತರಾವ ಪಾಟೀಲ, ಅಧ್ಯಕ್ಷರು, ನೀ.ಬ.ಸ.ಸಂಘ ಕಾರಂಜಾ ಯೋಜನೆ, ಶ್ರೀ ಹನಮಂತರಾವ ಬಿರಾದಾರ ಕೊರಟಗಿ, ಅಧ್ಯಕ್ಷರು, ನೀ.ಬ.ಸ.ಸಂಘ ಚಿಳಕಿನಾಲಾ ಯೋಜನೆ, ಶ್ರೀ ವಿಜಯ ದಶರಥ ಎಸ್. ಸಂಗನ್, ಆಡಳಿತಾಧಿಕಾರಿಗಳು, ಕಾಡಾ, ಕಲಬುರ್ಗಿ ಶ್ರೀ ಪಿ. ರಮೇಶ ಕುಮಾರ, ಎಲ್.ಡಿ.ಓ. (ಕೃಷಿ/ಸಹಕಾರ) ಆಡಳಿತಾಧಿಕಾರಿಗಳು, ಕಾಡಾ, ಕಲಬುರ್ಗಿ ಉಪಸ್ಥಿತರಿದ್ದರು. ಡಾ. ಸುರೇಶ ಪಾಟೀಲ, ಡೀನ್, ಕೃಷಿ ಮಹಾ ವಿದ್ಯಾಲಯ, ಕಲಬುರಗಿ ಇವರು ಸ್ವಾಗತಿಸಿದರು, ಶ್ರೀ ಮಂಜುನಾಥ ವಾ. ವಡವಡಗಿ ಸಹ ಪ್ರಾಧ್ಯಾಪಕರು, ವಾಲ್ಮಿ ಧಾರವಾಡ ಇವರು ವಂದಿಸಿದರು ಮತ್ತು ಶ್ರೀ ಸುರೇಶ ಕುಲಕರ್ಣಿ, ಸಮಾಲೋಚಕರು, ವಾಲ್ಮಿ, ಧಾರವಾಡ ಕಾರ್ಯಕ್ರಮ ನಿರೂಪಿಸಿದರು.