ನೀರು ಪೂರೈಕೆ ಸಮಸ್ಯೆಯಾಗದಂತೆ ಕಾರ್ಯನಿರ್ವಹಣೆ

ನಗರಸಭಾ ನೀರು ನಿರ್ವಾಹಕರಿಗೆ ಅಧ್ಯಕ್ಷರ ಸೂಚನೆ
ಪುತ್ತೂರು, ಮಾ.೩೦- ನೀರು ಜನರ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದ್ದು, ನೀರು ಸರಬರಾಜಿನ ಕುರಿತು ಬಹಳಷ್ಟು ದೂರುಗಳು ಬರುತ್ತಿದೆ. ನೀರಿಗೆ ಪ್ರಥಮ ಆದ್ಯತೆ ನೀಡಿ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ನಿರ್ವಹಣೆ ಮಾಡುವಂತೆ ನಗರ ಸಭಾ ನೀರು ನಿರ್ವಾಹಕರಿಗೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಸೂಚಿಸಿದರು.
ಅವರು ಸೋಮವಾರ ನಗರ ಸಭಾ ಸಭಾಂಗಣದಲ್ಲಿ ನಡೆದ ನೀರು ನಿರ್ವಾಹಕರ ಸಭೆಯಲ್ಲಿ ಸೂಚನೆ ನೀಡಿದರು. ನಗರ ಸಭೆಯ ೩೧ ವಾರ್ಡ್‌ಗಳಲ್ಲಿ ಒಟ್ಟು ೮,೫೦೦ ವಾಣಿಜ್ಯ, ಅಂಗಡಿ ಮುಗ್ಗಟ್ಟುಗಳು, ೧೫ ಸಾವಿರ ಮನೆಗಳಿವೆ. ೬೫ ಸಾವಿರ ಒಟ್ಟು ಜನಸಂಖ್ಯೆ ನಗರ ಸಭಾ ವ್ಯಾಪ್ತಿಯಲ್ಲಿದೆ. ಈ ಪೈಕಿ ವಾಣಿಜ್ಯ ಹಾಗೂ ಮನೆಗಳು ಸೇರಿದಂತೆ ಒಟ್ಟು ೧೧ ಸಾವಿರ ನೀರಿನ ಸಂಪರ್ಕಗಳಿವೆ. ೩೧ ವಾರ್ಡ್‌ಗಳಲ್ಲಿ ಒಟ್ಟು ೧೬೪ ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿರುವುದಲ್ಲದೆ ಉಪ್ಪಿನಂಗಡಿಯಿಂದ ದಿನವೊಂದಕ್ಕೆ ೬೫ ಲಕ್ಷ ಲೀಟರ್ ನೀರು ಸರಬರಾಜು ಆಗುತ್ತಿದೆ. ಹಾಗಿದ್ದರೂ ನೀರು ಪೂರೈಕೆಯಲ್ಲಿ ಸಮಸ್ಯೆಗಳು ಕಂಡುಬರುತ್ತಿದೆ.
ಮುಂದಿನ ಎರಡು ತಿಂಗಳು ನೀರಿನ ಸಮಸ್ಯೆ ಎದುರಾಗಲಿದೆ. ಏಪ್ರಿಲ್ ಪ್ರಥಮ ವಾರದಲ್ಲಿ ಜಾತ್ರೆ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಹೊರಭಾಗದ ಜನರು ಅಧಿಕವಾಗಿ ನಗರ ಸಭಾ ವ್ಯಾಪ್ತಿಗೆ ಬರಲಿದ್ದು ನೀರು ಅಧಿಕ ಪ್ರಮಾಣದಲ್ಲಿ ಬಳಕೆಯಾಗಲಿದೆ. ನೀರು ಸರಬರಾಜು ಸಂಬಂಧಿಸಿ ನಗರ ಸಭೆಯಿಂದ ವಿಶೇಷ ಮುತುವರ್ಜಿ ವಹಿಸಲಾಗುವುದು. ನಿರ್ವಾಹಕರು ನೀರಿನ ಸಮಸ್ಯೆ ಇರುವಲ್ಲಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು, ಪೈಪ್‌ಗಳಲ್ಲಿ ಸೋರಿಕೆಯಾಗುವುದನ್ನು ತಡೆಯುವ ಕೆಲಸ ಮಾಡಬೇಕು. ಆವಶ್ಯಕತೆಯಿರುವಲ್ಲಿ ಬೋರ್‌ವೆಲ್ ಪ್ಲೆಸ್ಸಿಂಗ್ ಮಾಡಿ ಕೊಡಲಾಗುವುದು ಮತ್ತು ಹೆಚ್ಚುವರಿ ಕೊಳವೆ ಬಾವಿಗಳಿಗೆ ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಾದ್ಯಂತ ನೀರು ನಿರ್ವಾಹಕರಿಗೆ ಏಕ ರೂಪದ ವೇತನ ನಿಗದಿಪಡಿಸಿದ್ದು, ಅದೇ ದರದಲ್ಲಿ ಇಲ್ಲಿಯೂ ನೀಡಲಾಗುತ್ತಿದೆ. ಇದರ ಹೊರತಾಗಿ ವೇತನ ಏರಿಕೆ ಮಾಡಲು ಅವಕಾಶವಿಲ್ಲ. ವೇತನ ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಜೀವಂಧರ್ ಜೈನ್ ಹೇಳಿದರು.
ಪೈಪ್‌ಲೈನ್‌ನಲ್ಲಿ ನೀರು ಸೋರಿಕೆಯಾಗುತ್ತಿರುವ ಕುರಿತು ಬಳಕೆದಾರರಿಂದ ದೂರುಗಳು ಬರುತ್ತಿದೆ. ಇದರ ಕುರಿತು ನೀರು ನಿರ್ವಾಹಕರು ತಮ್ಮ ವ್ಯಾಪ್ತಿಯಲ್ಲಿ ಪೈಪ್‌ಲೈನ್‌ನಲ್ಲಿ ನೀರು ಸೋರಿಕೆಯಗುತ್ತಿರುವ ಕುರಿತು ಗಮನಿಸಬೇಕು. ಸೋರಿಕೆಯಾಗುತ್ತಿರುವುದು ಕಂಡು ಬಂದರೆ ತಕ್ಷಣ ಕಚೇರಿ ವಿಭಾಗ ಮುಖ್ಯಸ್ಥರಿಗೆ ಮಾಹಿತಿ ನೀಡುವಂತೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ ತಿಳಿಸಿದರು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಉಪಸ್ಥಿತರಿದ್ದರು. ಸಭೆಯಲ್ಲಿ ನಗರ ಸಭಾ ನೀರು ವಿಭಾಗ ಮುಖ್ಯಸ್ಥ ವಸಂತ, ಜೂನಿಯರ್ ಇಂಜಿನಿಯರ್ ಶ್ರೀಧರ್ ಉಪಸ್ಥಿತರಿದ್ದರು. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರುಣ್ ಸ್ವಾಗತಿಸಿ, ವಂದಿಸಿದರು.