ನೀರು ಪೂರೈಕೆ ಬಿಂದಿಗೆ ಹಿಡಿದು ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ರಾಯಚೂರು.ಮಾ.೧೫- ನಗರದ ವಾರ್ಡ್ ನಂ.೨೯ ರಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಗಬ್ಬು ನಾರುವ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಸಮಾಜ ಪರಿವರ್ತನೆ ಸಮತಿ ಪದಾಧಿಕಾರಿಗಳು ನಗರದ ಟಿಪ್ಪು ಸುಲ್ತಾನ್ ದಲ್ಲಿ ಪ್ರತಿಭಟನೆ ನಡೆಸಿದರು. ತೀವ್ರ ಬರಗಾಲದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ನಗರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಂದಿಗೆ ಹಿಡಿದು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಬೋರ್‌ವೆಲ್ ದುರಸ್ತಿ ಹಾಗೂ ನೀರಿನ ಪೈಪ್ ಲೈನ್ ಮರಸ್ತಿ ಮಾಡದೇ ನೀರಿನ ಸಮಸ್ಯೆಯನ್ನು ಪರಿಹರಿಸಲು ವಿಫಲರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ಕಡೆ ಕೈಗಾರಿಕಾ ಕಂಪನಿಗಳಿಗೆ ಅಕ್ರಮವಾಗಿ ಕೃಷ್ಣಾ ನದಿಯಿಂದ ಬರುವ ಮುಖ್ಯ ಪೈಪ್ ಲೈನ್‌ಗೆ
ಸಂಪರ್ಕ ಕಲ್ಪಿಸಿ ಅತಿ ಹೆಚ್ಚು ನೀರು ಬಿಡಲಾಗುತ್ತಿದೆ. ಈ ಕಾರಣದಿಂದಾಗಿ ನಗರದ ಸಾರ್ವಜನಿಕರು ಕುಡಿಯುವ ನೀರಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ವಾರ್ಡಿನ ಸುತ್ತಮುತ್ತ ಸ್ವಚ್ಛತೆ, ಚರಂಡಿ ಹೂಳೆತ್ತುವುದು, ಹಾಗೂ ಬೀದಿ ದೀಪಗಳ ದುರಸ್ತಿ ಸೇರಿದಂತೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
೨೪-೭ ಕುಡಿಯುವ ನೀರಿನ ಯೋಜನೆ ಮತ್ತು ಕುಡಿಯುವ ನೀರಿಗಾಗಿ ಬಂದಿರುವ ಅನುದಾನ ಎಲ್ಲಿಗೆ ಹೋಯಿತು. ನಗರಸಭೆಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಂದರೂ ಸಹ ರಾಯಚೂರು ನಗರದಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಜಿಲ್ಲೆಯಲ್ಲಿ ೨೪೭ ಕುಡಿಯುವ ನೀರಿನ ಯೋಜನೆ ಮನೆ ಮನೆಗೆ ಶುದ್ಧ ನೀರು ತಲುಪಿಸುವ ಯೋಜನೆ ಕೇವಲ ಹೆಸರಿಗೆ ಮಾತ್ರವಾಗಿದೆ. ನೀರಿಗಾಗಿ ರಾತ್ರಿಯೆಲ್ಲಾ ನಿದ್ದೆಗೆಟ್ಟು ಕಾಯಬೇಕಾಗಿದೆ. ಅದೇ ರೀತಿ ವಾರ್ಡಿನಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಗಬ್ಬು ನಾರುವಂತಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಕೊಪ್ಪರ, ಮಲ್ಲಿಕಾರ್ಜುನ, ಲಕ್ಷ್ಮಿ, ರಂಗನಾಥ ಸೇರಿದಂತೆ ಉಪಸ್ಥಿತರಿದ್ದರು.