ನೀರು ಪಾಲಾದ ಸಹೋದರರಿಯರು: ಸಿಸಿಟಿವಿಯಲ್ಲಿ ಸೆರೆ

 

ದಾವಣಗೆರೆ.ಸೆ.೬: ಹರಿಹರ ತಾಲೂಕಿನ ಮಲೆಬೆನ್ನೂರು ಬಳಿಯ ಉಕ್ಕಡಗಾತ್ರಿಯ ತುಂಗಾಭದ್ರಾ ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದ ಸಹೋದರಿಯರು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ಮೃತದೇಹ ಇನ್ನು ಸಿಕ್ಕಿಲ್ಲ. ಎರಡನೇ ದಿನವಾದ ಇಂದೂ ಸಹ ಕಾರ್ಯಾಚರಣೆ ನಡೆಸಲಾಗಿದ್ದು, ದೇಹ ಪತ್ತೆಯಾಗಿಲ್ಲ.ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ವೀರಾಚಾರಿ ಎಂಬುವವರ ಮಕ್ಕಳಾದ ಚೈತ್ರಾ ಹಾಗೂ ಪುಷ್ಪಾ ಮೃತಪಟ್ಟ ದುರ್ದೈವಿಗಳು. ಚೈತ್ರಾರಿಗೆ ಹೊಳಲ್ಕೆರೆ ತಾಲೂಕಿನ ಗುಂಡೇರಿ ಗ್ರಾಮದ ಕಾರ್ತಿಕ್ ಅವರ ಜೊತೆ ಮದುವೆಯಾಗಿತ್ತು. ದಾವಣಗೆರೆಯ ಕಾಲೇಜೊಂದರಲ್ಲಿ ಪುಷ್ಪಾ ಓದುತ್ತಿದ್ದರು. ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಚೈತ್ರಾ ಹಾಗೂ ಪುಷ್ಪಾ ಬದುಕಿರುವ ಸಾಧ್ಯತೆ ತೀರಾ ಕಡಿಮೆ. ಇಬ್ಬರಿಗೂ ಈಜು ಬಾರದ ಕಾರಣ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮೃತದೇಹ ಇನ್ನು ಸಿಕ್ಕಿಲ್ಲ.ಕುಟುಂಬ ಸಮೇತ ಉಕ್ಕಡಗಾತ್ರಿಯ ಸುಕ್ಷೇತ್ರಕ್ಕೆ ಕರಿಬಸವೇಶ್ವರ ಸ್ವಾಮಿ ದರ್ಶನಕ್ಕೆ ಬಂದಿದ್ದರು. ಯಾತ್ರಾರ್ಥಿಗಳು ಸ್ನಾನ‌ಮಾಡಲು ನದಿಗೆ ಇಳಿದಿದ್ದಾರೆ. ಈ ವೇಳೆ ನೀರಿನ ಸೆಳವಿನ ರಭಸಕ್ಕೆ ಸಿಕ್ಕಿಹಾಕಿಕೊಂಡು ಮುಳುಗಿದ್ದಾರೆ. ಈ ವೇಳೆ ಅಕ್ಕಪಕ್ಕದಲ್ಲಿದ್ದವರು ಎಷ್ಟೇ ಪ್ರಯತ್ನಿಸಿದರೂ‌ ಮೇಲಕ್ಕೆ ತರಲಾಗಲಿಲ್ಲ. ನದಿ ತಟದಲ್ಲಿದ್ದವರು ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡಿದ್ದರು. ಇನ್ನು ಚೈತ್ರಾ ಹಾಗೂ ಪುಷ್ಪಾ ಸಹ ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದು, ಹೆಚ್ಚಿನ ನೀರು ಇದ್ದ ಕಾರಣ ಈಜು ಬರುವವರು ಮೇಲಕ್ಕೆ ಎತ್ತಲು ಪ್ರಯತ್ನಿಸಿದರೂ ಆಗಲಿಲ್ಲ. ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅವರು ಬರವಷ್ಟರಲ್ಲಿಇಬ್ಬರೂ ಕೊಚ್ಚಿಹೋಗಿದ್ದಾರೆ.ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಪುಷ್ಪಾ ಮತ್ತು ಚೈತ್ರಾ ಇಳಿದಿದ್ದರೂ ಅಪಾಯದ ಸ್ಥಳದಲ್ಲಿ ಸ್ನಾನಕ್ಕೆ ಹೋಗಿದ್ದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಸಮೀಪದಲ್ಲಿಯೇ ಇದ್ದ ಮಹಿಳೆಯರು, ಪುರುಷರು, ಭಕ್ತರು, ಯುವಕರು ಸ್ವಲ್ಪ ಬುದ್ದಿವಂತಿಕೆ ಉಪಯೋಗಿಸಿದ್ದರೆ ಬದುಕಿಸಬಹುದಿತ್ತು. ದೇವರ ದರ್ಶನಕ್ಕೆ ಬಂದವರು ದೇವರ ಪಾದ ಸೇರಿದ್ದು ನಿಜಕ್ಕೂ ವಿಪರ್ಯಾಸ.ಹರಿಯುವ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ಮೃತದೇಹ ಹುಡುಕಾಟಕ್ಕೆ ತೊಡಕಾಗಿದೆ. ಆದರೂ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ತಹಶೀಲ್ದಾರ್ ಡಾ. ಎಂ. ಬಿ. ಅಶ್ವತ್, ರವಿಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.