ನೀರು, ನೈರ್ಮಲ್ಯದ ವ್ಯವಸ್ಥೆ ಶುದ್ಧವಾಗಿರಬೇಕು-ಪೂಜಾರ

ಬ್ಯಾಡಗಿ, ನ1- ಮನುಷ್ಯ ಆರೋಗ್ಯವಂತನಾಗಿರಲು ಕುಡಿಯುವ ನೀರು ಮತ್ತು ನೈರ್ಮಲ್ಯದ ವ್ಯವಸ್ಥೆ ಶುದ್ಧವಾಗಿರಬೇಕು. ನೀರು ಮತ್ತು ಸ್ವಚ್ಛತೆ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪುರಸಭಾ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಹೇಳಿದರು.
ಸ್ಥಳೀಯ ಪುರಸಭೆಯ ಸಭಾಭವನದಲ್ಲಿ ಪುರಸಭೆ ಕಾರ್ಯಾಲಯ, ಕೆಯುಐಡಿಎಫ್’ಸಿ ಹಾಗೂ ನೀಡ್ಸ್ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಜಲಸಿರಿ ಯೋಜನೆಯಡಿ ಸಲೂನ್ ಹಾಗೂ ಪಾರ್ಲರ್ ಮಾಲೀಕರಿಗೆ ಮತ್ತು ಕೆಲಸಗಾರರಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕುಡಿಯುವ ನೀರು ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಮನುಷ್ಯನಿಗೆ ಶೇ. 75 ರಷ್ಟು ರೋಗ ರುಜಿನಗಳು ಅಶುದ್ಧ ನೀರಿನ ಬಳಕೆಯಿಂದ ಬರುತ್ತವೆ. ಈ ದಿಶೆಯಲ್ಲಿ ನಾವು ನೀರು ಮತ್ತು ನೈರ್ಮಲ್ಯದ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರಲ್ಲದೇ ನೀರಿನ ಸದ್ಬಳಕೆ ಮತ್ತು ಪರಿಸರ ಸ್ವಚ್ಛತೆಗೆ ಪುರಸಭೆಯ ವತಿಯಿಂದ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ತಾಲೂಕಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ದುಂಡೆಪ್ಪ ಕಾಯಕದ ವಹಿಸಿದ್ದರು. ಪುರಸಭೆ ಪರಿಸರ ಅಭಿಯಂತರ ಎ.ಎಫ್. ಉಮೇಶ, ಬಿ.ಎಚ್. ಲಕ್ಕಣ್ಣನವರ, ಖಂಡೆಪ್ಪ ನೆಗಳೂರ, ವಿಜಯ ಕಾಯಕದ ಸೇರಿದಂತೆ ಹಡಪದ ಸಮಾಜದ ಮಾಲೀಕರು ಮತ್ತು ಕೆಲಸಗಾರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.