ನೀರು ನುಗ್ಗಿ ಬೆಳೆ ನಷ್ಟ: ಪರಿಹಾರ ನೀಡುವಂತೆ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.25: ನೀರಾವರಿ ಇಲಾಖೆಯ ಎಂಜಿನಿಯರ್ ಅವರ ಅಚಾತುರ್ಯದಿಂದ ಕೆರೆ ನೀರು ನುಗ್ಗಿ ರೈತರ ಹತ್ತಾರು ಎಕರೆ ಪ್ರದೇಶದಲ್ಲಿ ಕಟಾವು ಮಾಡಿದ್ದ ಭತ್ತದ ಬೆಳೆ ನೀರು ಪಾಲಾದ ಘಟನೆ ತಾಲೂಕಿನ ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಗ್ರಾಮದಲ್ಲಿ ಘಟಿಸಿದೆ.
ಭೀಕರ ಬರಗಾಲದ ನಡುವೆಯೂ ಹೇಮಾವತಿಯ ನೀರಿನಿಂದ ತಾಲೂಕಿನ ಬಳ್ಳೇಕೆರೆ ಗ್ರಾಮದ ಕೆರೆಯನ್ನು ತುಂಬಿಸಲಾಗಿದ್ದು. ಕೆರೆ ಬಯಲಿನ ರೈತರು ಸಂವೃದ್ದವಾಗಿ ಭತ್ತ, ಕಬ್ಬು ಮುಂತಾದ ಬೆಳೆಗಳ ಜೊತೆಗೆ ತೆಂಗು, ಅಡಿಕೆ, ಬಾಳೆ ಮುಂತಾದ ಬೆಳೆಗಳನ್ನು ಬೆಳೆದಿದ್ದರೂ. ಕೆರೆ ಕೆಳಗಿನ ಪ್ರದೇಶದ ಕೆಲವು ರೈತರು ಭತ್ತ ಕಟಾವು ಮಾಡಿ ಒಕ್ಕಣೆ ಮಾಡುವುದಕ್ಕಾಗಿ ಹರಿ ಹಾಕಿದ್ದರು.
ತುಂಬಿದ ಕೆರೆಯಲ್ಲಿನ ತೂಬು ಸಮಪರ್ಕವಾಗಿ ಕಾರ್ಯ ನಿರ್ವಹಿಸದ ಪರಿಣಾಮ ಕೆರೆ ಬಯಲಿನ ಕೆಳ ಭಾಗದ ರೈತರಿಗೆ ನೀರು ಹೋಗುತ್ತಿರಲಿಲ್ಲ. ಇದರಿಂದಾಗಿ ಕೆರೆ ಬಯಲಿನ ಕೆಳ ಭಾಗದ ರೈತರು ತೂಬು ಸರಿಪಡಿಸಿ ಕೆರೆ ಕಾಲುವೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುವಂತೆ ಮಾಡಿ ಕೆಳ ಪ್ರದೇಶದ ರೈತರ ಭೂಮಿಗೆ ನೀರು ಒದಗಿಸುವಂತೆ ಕೆರೆ ಬಯಲಿನ ಕೊನೆಯ ಭಾಗದ ಕೆಲವು ರೈತರು ನೀರಾವರಿ ಇಲಾಖೆಗೆ ಮನವಿ ಮಾಡಿದ್ದರು.
ರೈತರ ಮನವಿ ಮೇರೆಗೆ ಕೆರೆಯ ತೂಬು ಸರಿಪಡಿಸಲು ನೀರಾವರಿ ಇಲಾಖೆಯ ಎಂಜಿನಿಯರೊಬ್ಬರು ಕಾರ್ಯಚರಣೆಗೆ ಇಳಿದರು. ಕೆರೆಯಲ್ಲಿ ಅಪಾರ ಪ್ರಮಣದ ನೀರು ತುಂಬಿರುವುದರಿಂದ ತೂಬಿನ ಬಳಿಯ ನೀರಿನ ಒತ್ತಡವನ್ನು ಕಡಿಮೆ ಮಾಡಲು ತೂಬಿನ ಸುತ್ತ ಮರಳು ಚೀಲಗಳನ್ನಿಟ್ಟು ತೂಬು ಸರಿಪಡಿಸುವ ಬದಲು ಯಾವುದೇ ಪೂರ್ವ ಸಿದ್ದತಾ ಕ್ರಮಗಳನ್ನು ಅನುಸರಿಸದೆ ಎಂಜಿನಿಯರ್ ಕೆರೆಯ ತೂಬಿನಲ್ಲಿ ಕಟ್ಟಿಕೊಂಡಿದ್ದ ಕಸಕಡ್ಡಿಗಳು ಮತ್ತಿತರ ವಸ್ತುಗಳನ್ನು ತೆರವುಗೊಳಿಸಿ ತೂಬಿನ ಗೇಟ್ ಸರಿಪಡಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ನೀರಿನ ರಭಸಕ್ಕೆ ತೂಬಿನ ಗೆಟ್ ಹಾನಿಗೊಂಡು ಏಕಾಏಕಿ ಅಪಾರ ಪ್ರಮಾಣದ ನೀರು ಕೆಳ ಭಾಗಕ್ಕೆ ನುಗ್ಗಿದ ಪರಿಣಾಮ ಕೆರೆ ಬಯಲಿನ ಹತ್ತಾರು ಎಕರೆ ಪ್ರದೇಶದಲ್ಲಿ ಕಟಾವು ಮಾಡಿ ಹಾಕಿದ್ದ ಭತ್ತದ ಬೆಳೆ ಹಾನಿಗೊಂಡಿದ್ದು ರೈತರಿಗೆ ಲಕ್ಷಾಂತರ ರೂ ನಷ್ಠ ಸಂಭವಿಸಿದೆ. ಸಕಾಲದಲ್ಲಿ ರೈತರು ಮರಳಿನ ಚೀಲಗಳನ್ನು ಹಾಕಿ ತೂಬನ್ನು ಮುಚ್ಚಿದ ಪರಿಣಾಮ ಕೆರೆ ಒಡೆದು ಸಂಭವಿಸಬಹುದಾದ ಭಾರೀ ದುರಂತ ತಪ್ಪಿದೆ.
ನೀರಾವರಿ ಇಲಾಖೆಯ ಅವಿವೇಕತನಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಳ್ಳೇಕೆರೆ ಗ್ರಾಮದ ರೈತರು ಹಾನಿಗೊಂಡಿರುವ ಭತ್ತದ ಬೆಳೆಗಾರ ರೈತರಿಗೆ ನೀರಾವರಿ ಇಲಾಖೆ ಸಂಪೂರ್ಣ ನಷ್ಠ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.