ನೀರು ನೀಡಿದ ಶಾಸಕನಿಗೆ ಬೆಳ್ಳಿ ಕಳಸದ ಗೌರವ

ಶಹಾಬಾದ:ಮಾ.26:ತಾಲೂಕಿನ ತೊನಸನಳ್ಳಿ (ಎಸ್) ಗ್ರಾಮಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದರು ಶಾಶ್ವತ ಕುಡಿಯುವ ನೀರು ಇಲ್ಲದೆ ಪರದಾಡುತ್ತಿದ್ದ ಗ್ರಾಮಸ್ಥರಿಗೆ, ನೀಡಿದ ಅಶ್ವಾಸನೆಯಂತೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಿದ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಅವರ ಧರ್ಮ ಪತ್ನಿ ಜಯಶ್ರೀ ಮತ್ತಿಮಡು ಅವರಿಗೆ ಬೆಳ್ಳಿಯ ಕಳಸ, ಕಿರೀಟ ನೀಡಿ ಸನ್ಮಾನಿಸಿ, ಕೃತಜ್ಞತೆ ಅರ್ಪಿಸಿದರು.
ಶನಿವಾರ ತೊನಸನಳ್ಳಿ ಗ್ರಾಮಕ್ಕೆ. ಗೋಳಾ (ಕೆ) ಗ್ರಾಮದ ಬಳಿಯ ಕಾಗಿಣಾ ನದಿಯ ಜಾಕ್‍ವೇಲ್‍ನಿಂದ ಕೆಕೆಆರ್‍ಡಿಬಿ ಯೋಜನೆ ಅಡಿಯಲ್ಲಿ 3 ಕೋ. ರೂ ವೆಚ್ಚದಲ್ಲಿ ಶಾಶ್ವತ ನೀರು ಸರಬರಾಜು ಯೋಜನೆ ಹಾಗೂ 666 ಲಕ್ಷ ರೂ. ವೆಚ್ಚದ ಜೆಜೆಎಮ್ ಯೋಜನೆ ಅಡಿಯಲ್ಲಿ ಮನೆಮನೆಗೆ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ತಮ್ಮ ಗ್ರಾಮಕ್ಕೆ ಕಳೆದ 75 ವರ್ಷದಿಂದ ಜನಪ್ರತಿನಿಧಿಗಳು ಕೇವಲ ಆಶ್ವಾಸನೆ ನೀಡುತ್ತ ಹೋಗುತ್ತಿದ್ದರೆ, ಶಾಸಕ ಬಸವರಾಜ ಮತ್ತಿಮಡು ಅವರು ಗ್ರಾಮಕ್ಕೆ ನೀರು ಕೊಟ್ಟೆ ಮತ್ತೆ ಗ್ರಾಮಕ್ಕೆ ಆಗಮಿಸುವದಾಗಿ ಶಪಥ ಮಾಡಿ, ನುಡಿದಂತೆ ನಡೆದಿದ್ದರಿಂದ ಗ್ರಾಮಸ್ಥರು ಪ್ರತಿ ಮನೆಯವರುಗೆ ವಂತಿಗೆ ಸಂಗ್ರಹಿಸಿ, ಶಾಸಕ ಮತ್ತಿಮಡು ಹಾಗೂ ಅವರ ಪತ್ನಿ ಜಯಶ್ರೀ ಮತ್ತಿಮಡು ಅವರಿಗೆ ಬೆಳ್ಳಿಯ ಕಿರೀಟ ನೀಡಿ, ಬೆಳ್ಳಿ ಬಿಂದಿಗೆ ಅದರ ಮೇಲೆ ಟೆಂಗು ಇಟ್ಟ ಕಲಶವನ್ನು ಜಯಶ್ರೀ ಮತ್ತಿಮಡು ಅವರ ತಲೆಯ ಮೇಲೆ ಇದ್ದು ಗೌರವಿಸಿದರು.
ಯೋಜನೆಗಳಿಗೆ ಚಾಲನೆ ನೀಡಿದ ಶಾಸಕ ಬಸವರಾಜ ಮತ್ತಿಮಡು ಅವರು ಹಿಂದೆ ಅಧಿಕಾರದಲ್ಲಿದ್ದವರು 1.5 ಕೋ. ರೂ. ವೆಚ್ಚದಲ್ಲಿ ನೀರಿನ ಯೋಜನೆ ರೂಪಿಸಿರುವದಾಗಿ ಹೇಳಿ ಭೂಮಿ ಪೂಜೆ ಮಾಡಿದ್ದರು. ಆದರೆ, ಆಡಳಿತಾತ್ಮಕವಾಗಿ ನೋಡಿದಾಗ ಈ ಯೋಜನೆಗೆ ಯಾವುದೆ ಹಣ ಮೀಸಲಿಡದೆ ಕೇವಲ ಕಾಗದದಲ್ಲಿ ಮಾತ್ರ ಇದ್ದಿದ್ದು ಕಂಡು ಬಂದಿತು. ಗ್ರಾಮಸ್ಥರ ಕಷ್ಟಸ್ಥಿತಿಯನ್ನು ಕಂಡು, ಕೆಕೆಆರ್‍ಡಿಬಿ ಯೋಜನೆ ಅಡಿಯಲ್ಲಿ ಮಂಜೂರಾದ 3 ಕೋ ರೂ. ಸಂಪೂರ್ಣ ಹಣವನ್ನು ಸಂಪೂರ್ಣ ಯೋಜನೆಗೆ ನೀಡಿದ್ದಾಗೆ ಹೇಳಿದರು. ಕರೋನಾ ಸಮಸ್ಯೆಯಿಂದ ಯೋಜನೆ ಪೂರ್ಣಗೊಳ್ಳಲು ವಿಳಂಬವಾಗಿದೆ ಎಂದು ಹೇಳಿ, ಗ್ರಾಮಕ್ಕೆ ಸಿಸಿ ರಸ್ತೆ ಸೇರಿದಂತೆ ವಿವಿಧ ಯೋಜನೆಗೆ ಒಟ್ಟು 17 ಕೋ. ರೂ. ಅಭಿವೃದ್ದಿ ಕಾರ್ಯಕೈಗೊಳ್ಳಲಾಗಿದೆ. ಗ್ರಾಮಸ್ಥರಿ ಯಾವುದೇ ಬೇಡಿಕೆಗೆ ಸರ್ಕಾರದ ಮಟ್ಟದಲ್ಲಿ,ವಯಕ್ತಿಕವಾಗಿ ಸಹಕರಿಸುವದಾಗಿ ಹೇಳಿದರು. ಮುಂದಿನ ಚುನಾವಣೆಯಲ್ಲಿ ತಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.
ಸಾನಿಧ್ಯ ವಹಿಸಿದ್ದ ಶ್ರೀಗುರು ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡುತ್ತ ಮಾತನಾಡಿ ಗ್ರಾಮದ, ಜನರ ಸಮಸ್ಯೆಗೆ ಸ್ಪಂದಿಸಿ, ಗ್ರಾಮಸ್ಥರು ಬೇಡಿಕೆ ಅನ್ವಯ ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡ ಶಾಸಕ ಬಸರಾಜ ಮತ್ತಿಮಡು ಅವರ ಕಾರ್ಯ ಶ್ಲಾಘನೀಯ, ಅಂತಹ ಜನಪ್ರತಿನಿಧಿಗಳು ಇಂದು ಅತ್ಯವಶ್ಯಕವಾಗಿದೆ. ಈ ರೀತಿ ಕಾರ್ಯ ಮಾಡುವ ಶಾಸಕರಿಗೆ ಗ್ರಾಮಸ್ಥರ ಆಶೀರ್ವಾದ ನಿರಂತರವಾಗಿರುತ್ತದೆ ಎಂದು ಹೇಳಿದರು.
ಬಿಜೆಪಿ ಶಹಾಬಾದ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾತನಾಡಿದರು. ವೇದಿಕೆ ಮೇಲೆ ಪೂಜ್ಯ ಪ್ರಭು ಮುತ್ಯಾ, ಕೋತಲಪ್ಪಾ ಮುತ್ಯಾ, ಶಿವಲಿಂಗಪ್ಪ ಗೊಳೇದ, ವಾಡಿ ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಎಇಇ ಅಜಯ ರಾಠೋಡ, ಜೆಇ ರುಕುಮ್ ಪಟೇಲ, ನಾಗೇಂದ್ರ ಹುಗ್ಗಿ, ನಿಂಗಣ್ಣ ಹುಳಗೋಳ, ಮಲ್ಲಿಕಾರ್ಜುನ ಮರತೂರ, ನಿಂಗಣ್ಣಗೌಡ ಮಾಲಿ ಪಾಟೀಲ, ಸಿದ್ದು ಪೂಜಾರಿ, ಬೆಳ್ಳೆಪ್ಪ ಖಣದಾಳ, ಪಿಡಿಒ ನಿಂಗಪ್ಪ ಕೆಂಬಾವಿ, ಮಹಾದೇವ ಬಂದಳ್ಳಿ, ಪಿ.ವಿ.ನಿಂಗಪ್ಪ , ಗುತ್ತಿಗೆದಾರ ಡಿ.ಎಸ್.ಮಾಚನೂರ, ಮುತ್ತಮ್ಮ ಮಾಚನೂರ ವೇದಿಕೆ ಮೇಲೆ ಇದ್ದರು. ಗ್ರಾಪಂ. ಅಧ್ಯಕ್ಷೆ ಕಾವೇರಿ ಮದ್ರಕಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಮದ್ರಕಿ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಮುಂಚೆ ಗ್ರಾಮಕ್ಕೆ ಆಗಮಿಸಿದ ಶಾಸಕ ಬಸವರಾಜ ಮತ್ತಿಮಡು ದಂಪತಿಗಳಿಗೆ ಮಹಿಳೆಯರು, ಪೂರ್ಣ ಕುಂಭದಿಂದ ಭವ್ಯ ಸ್ವಾಗತ ಕೋರಿದರು. ಜಯಶ್ರೀ ಮತ್ತಿಮಡು ಅವರು ವಿದ್ಯಾರ್ಥಿನಿಯರಿಗೆ ಪರೀಕ್ಷಾ ಪ್ಯಾಡ್ ನೀಡಿದರು.