ನೀರು ದರ ಏರಿಕೆಗೆ ಜಲಮಂಡಳಿ ಪ್ರಸ್ತಾವ

ಬೆಂಗಳೂರು, ಜೂ. ೯- ಆರ್ಥಿಕ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ನೀರಿನ ದರ ಏರಿಕೆಗೆ ಅನುಮತಿ ನೀಡಬೇಕೆಂದು ಬೆಂಗಳೂರು ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈಗಾಗಲೇ ವಿದ್ಯುತ್ ದರ ಏರಿಕೆಯಾಗಿದ್ದು ಇದರ ಬೆನ್ನಲ್ಲೇ ಕಾವೇರಿ ನೀರಿನ ದರವು ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.೨೦೧೪ರಲ್ಲಿ ಜಲಮಂಡಳಿ ನೀರು ದರವನ್ನು ಹೆಚ್ಚಳ ಮಾಡಿತ್ತು. ಈಗ ಜಲಮಂಡಳಿಗೆ ಆರ್ಥಿಕ ಹೊರೆಯಗಿದ್ದು, ಅದನ್ನು ಸರಿದೂಗಿಸಿಕೊಳ್ಳಲು ದರ ಏರಿಕೆ ಪರಿಷ್ಕರಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.ಮಂಡಳಿಯ ಮಾಸಿಕ ಆದಾಯ ೧೦೦ ಕೋಟಿ ರೂ. ಇದೆ. ೭೦ ಕೋಟಿ ರೂ.ಗಳನ್ನು ವಿದ್ಯುತ್ ಶುಲ್ಕ ಪಾವತಿಸುತ್ತಿದೆ. ಸಿಬ್ಬಂದಿ ವೇತನ, ದುರಸ್ಥಿ ಕೊಳವೆ ಬಾವಿ ಬದಲಾವಣೆ, ಹೊಸ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಬಾಕಿ ಹಣ ಪಾವತಿಯಾಗಿಲ್ಲ. ಇದು ಮಂಡಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹೊರೆ ಬೀಳುತ್ತದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.
೧೯೯೮ರ ಅವಧಿಯಲ್ಲಿ ವಿದ್ಯುತ್ ಬಿಲ್ ೩ ಕೋಟಿ ಇತ್ತು. ಈಗ ೭೦ ಕೋಟಿ ರೂ. ಗಡಿದಾಟಿದೆ. ಪ್ರತಿ ವರ್ಷವು ವಿದ್ಯುತ್ ಬಿಲ್ ಪಾವತಿ ಮಾಡುವುದು ಮಂಡಳಿಗೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ನೀರಿನ ದರ ಪರಿಷ್ಕರಣೆ ಅಗತ್ಯವಾಗಿದೆ ಎಂದು ಜಲಮಂಡಳಿ ನೀಡಿದೆ.