ನೀರು ತುಂಬಿಸುವ ಯೋಜನೆ: ಬಿಜೆಪಿ ಮಹತ್ವದ ಪಾತ್ರ: ಬಳ್ಳಾರಿ


ಬ್ಯಾಡಗಿ,ಜ.11: ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಎರಡು ಮಹತ್ವದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಹತ್ವದ ಪಾತ್ರ ವಹಿಸಿದ್ದು, ಇದರ ರೂವಾರಿಯಾಗಿರುವ ಯಡಿಯೂರಪ್ಪ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕೆಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ 50ಲಕ್ಷ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಶ್ರೀಹೋಳಿ ಬಸವೇಶ್ವರ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 2018-19ರಲ್ಲಿ ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಂದ ಸಂದರ್ಭದಲ್ಲಿ ಆಗಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಬಳಿ ಕೆರೆ ತುಂಬಿಸುವ ಯೋಜನೆಗೆ ಅನುದಾನ ಕೇಳಲು ತೆರಳಿದ ಸಮಯದಲ್ಲಿ ತಮ್ಮನ್ನು ಬರಿಗೈಯಲ್ಲಿ ಕಳಿಸಿದ್ದರು. ಈ ವಿಷಯವನ್ನರಿತಿದ್ದ ನಮ್ಮ ನಾಯಕ ಯಡಿಯೂರಪ್ಪನವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 369ಕೋಟಿ ರೂಗಳ ಅನುದಾನಕ್ಕೆ ಶೀಘ್ರ ಮಂಜೂರಾತಿ ನೀಡಿದ್ದನ್ನು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಸ್ಮರಿಸಿದರಲ್ಲದೇ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆಗಳಿಗೆ ಹೆಚ್ಚುವರಿಯಾಗಿ 40ಕೋಟಿ ರೂಗಳ ಅನುದಾನವನ್ನು ಒದಗಿಸುವ ಮೂಲಕ ಯೋಜನೆಗಳ ಗಾತ್ರವನ್ನು 409ಕೋಟಿ ರೂಗಳಿಗೆ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ಅಲ್ಲದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೂರದೃಷ್ಠಿ ಯೋಜನೆಗಳನ್ನು ರೂಪಿಸುವ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿವೆ. ಕೋವಿಡ್ ಮತ್ತು ಅತಿವೃಷ್ಠಿಯ ಆರ್ಥಿಕ ಸಂಕಷ್ಟದಲ್ಲಿದ್ದರೂ ಸಹ ತಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ಈವರೆಗೂ ಬಿಜೆಪಿ ಸರ್ಕಾರ 1800ಕೋಟಿ ರೂಗಳಿಗೂ ಹೆಚ್ಚು ಅನುದಾನವನ್ನು ಬಿಡುಗಡೆ ನೀಡಿದೆ. ಕ್ಷೇತ್ರದಲ್ಲಿ ಪ್ರಸಕ್ತ ಸಾಲಿನಲ್ಲಿಯೇ 14 ಸಮುದಾಯ ಭವನಗಳಿಗೆ 7ಕೋಟಿ ರೂಗಳ ಅನುದಾನವನ್ನು ತಂದಿರುವೆ. ದೇಶದ ಇತಿಹಾಸದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ನೇರವಾಗಿ ಅನುದಾನವನ್ನು ನೀಡುತ್ತಿರುವುದು ನಮ್ಮ ಬಿಜೆಪಿ ಸರ್ಕಾರ ಎಂದರಲ್ಲದೇ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಗಳಿಗೆ ಒಂದೂವರೆ ಲಕ್ಷರೂಗಳ ಸಹಾಯ ಧನವನ್ನು ನೀಡಲಾಗಿದೆ. ಮಧ್ಯಂತರ ಬೆಳೆ ವಿಮೆಯನ್ನು ಘೋಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಹಗಲು ಹೊತ್ತು ತ್ರೀಪೇಸ ವಿದ್ಯುತ್ ನೀಡಲು ಸರ್ಕಾರದ ಮಟ್ಟದಲ್ಲಿ ತಯಾರಿ ನಡೆದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಲಲಿತಾ ಗೌಡ್ರ ವಹಿಸಿದ್ದರು. ಉಪಾಧ್ಯಕ್ಷ ಈಶ್ವರ ನೇಶ್ವಿ, ಸದಸ್ಯರಾದ ಕಮಲವ್ವ ಕಾಕೋಳ, ದ್ಯಾಮನಗೌಡ ಪೂಜಾರ, ಹೇಮಂತ್ ಶೆಟ್ಟರ, ಬನಶಂಕರಿ ಕೆರೂಡಿ, ಷಣ್ಮುಖಪ್ಪ ಮುಚ್ಚಟ್ಟಿ, ಶೋಭಾ ಮಾಳಗಿ, ಕವಿತಾ ಮುಚ್ಚಟ್ಟಿ, ವೀರನಗೌಡ ಗೌಡ್ರ, ಪುರಸಭೆ ಅಧ್ಯಕ್ಷೆ ಫಕ್ಕೀರಮ್ಮ ಚಲುವಾದಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮರಡೆಪ್ಪ ಹೆಡಿಯಾಲ, ಮುಖಂಡರಾದ ಚಂದ್ರಪ್ಪ ಮುಚ್ಚಟ್ಟಿ, ಶೇಖರಗೌಡ ಗೌಡ್ರ, ಹನುಮಂತಪ್ಪ ಮಾಳಗಿ, ಬಸವರಾಜ ಕಾಕೋಳ, ಮರಡೆಪ್ಪ ಮುಚ್ಚಟ್ಟಿ, ಇಂಜನೀಯರ್ ಎಚ್.ಡಿ.ಶಾಂತಕುಮಾರ, ಪಿಡಿಓ ಲತಾ ತಬರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಾಕ್ಸ್…..

ಶಾಸಕರಿಗೆ 2.50ಕ್ವಿಂಟಾಲ್ ಸೇಬುಹಣ್ಣಿನ ಮಾಲೆ:
ಕಾರ್ಯಕ್ರಮಕ್ಕೂ ಮುನ್ನ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರಿಗೆ ದೇವಸ್ಥಾನ ಸಮೀತಿ ಹಾಗೂ ಗ್ರಾಮಸ್ಥರೆಲ್ಲರ ಪರವಾಗಿ ಸುಮಾರು 35ಸಾವಿರ ರೂಗಳ ವೆಚ್ಚದಲ್ಲಿ ವಿಶೇಷವಾಗಿ ತಯಾರಿಸಿದ್ದ 2.50ಕ್ವಿಂಟಾಲ್ ತೂಕದ ಸೇಬು ಹಣ್ಣಿನ ಮಾಲೆಯನ್ನು ಹಾಕುವ ಮೂಲಕ ಸ್ವಾಗತಿಸಿ, ಗ್ರಾಮದಲ್ಲಿ ಸಕಲ ವಾದ್ಯಗೋಷ್ಠಿಗಳೊಂದಿಗೆ ನೂರಾರು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯನ್ನು ನಡೆಸುವುದರೊಂದಿಗೆ ಸಂಭ್ರಮದ ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತು.