ನೀರು ತುಂಬಿದ್ದ ಹೊಂಡಕ್ಕೆ ಬಾಲಕ ಬಿದ್ದು ಮೃತ್ಯು

ಕಾಸರಗೋಡು, ನ.೧೫- ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಆರು ವರ್ಷದ ಬಾಲಕ ಮೃತಪಟ್ಟ ಘಟನೆ ಮಾನ್ಯ ಸಮೀಪ ಶನಿವಾರ ಸಂಜೆ ನಡೆದಿದೆ. ಚೌಕಿ ದೇರ್ಜಾಲಿನ ಅಬ್ದುಲ್ ಲತೀಫ್‌ರವರ ಪುತ್ರ ಮುಹಸೀನ್ (6) ಮೃತಪಟ್ಟ ಬಾಲಕ. ಮುಹಸೀನ್‌ ಮೊಗ್ರಾಲ್ ಪುತ್ತೂರು ಕಲ್ಲಂಗೈ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿಯಾಗಿದ್ದನು. ವಿವಾಹದಲ್ಲಿ ಪಾಲ್ಗೊಳ್ಳಲು ಕುಟುಂಬ ಸಹಿತ ಮಾನ್ಯಕ್ಕೆ ಬಂದಿದ್ದರು. ಆಟವಾಡುತ್ತಿದ್ದ ಬಾಲಕ ನೀರಿನ ಹೊಂಡಕ್ಕೆ ಬಿದ್ದಿದ್ದು, ಜೊತೆಯಲ್ಲಿದ್ದವರು ನೀಡಿದ ಮಾಹಿತಿಯಂತೆ ಸ್ಥಳಕ್ಕಾಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದರು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.