ನೀರುಪಾಲಾದ ಅಡಿಕೆ ತೋಟ ಸಂಕಷ್ಟದಲ್ಲಿ ರೈತರು 

ದಾವಣಗೆರೆ.ಸೆ.೬: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಹಾನಿ ಹೆಚ್ಚಾಗುತ್ತಿರುವುದು ಜಾಸ್ತಿಯಾಗುತ್ತಿದೆ. ರೈತರು ಕಂಗಾಲಾಗಿದ್ದಾರೆ. ಚನ್ನಗಿರಿ ತಾಲೂಕು ಒಂದರಲ್ಲಿಯೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ಜಲಾವೃತವಾಗಿದೆ. ತೋಟದೊಳಗೆ ಹೋಗಲೂ ಅಡಿಕೆ ಬೆಳೆಗಾರರು ಪರದಾಡುವಂತಾಗಿದೆ. ಅಡಿಕೆ ಕೊಯ್ಲಿನ ವೇಳೆಯಲ್ಲಿ ಸುರಿದಿರುವ ಭಾರೀ ಮಳೆಯು ಆಘಾತ ತಂದಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 599 ಮನೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಅದರಲ್ಲಿ 540 ಮನೆಗಳಿಗೆ ಪರಿಹಾರ ಮಂಜೂರಾತಿ ಬಾಕಿ ಇದೆ. ರುದ್ರಾಪುರ ಗ್ರಾಮದಲ್ಲಿ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ.ಕಳೆದ ಹದಿನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಇನ್ನೂರು ಹತ್ತು ಪಟ್ಟು ಜಾಸ್ತಿ ಮಳೆಯಾಗಿದೆ. 144 ಮಿಲೀ.ಮೀ ಹೆಚ್ಚು ಮಳೆಯಾಗಿದೆ, ಜಿಲ್ಲೆಯಾದ್ಯಂತ ಒಟ್ಟು 13,608 ಹೆಕ್ಟೇರ್ ಬೆಳೆಹಾನಿಯಾಗಿದ್ದು ಪರಿಹಾರ ಮಂಜೂರಾತಿಗಾಗಿಸರ್ಕಾರಕ್ಕೆ ಪ್ರಸ್ತಾವನೆವನ್ನು ಈಗಾಗಲೇ ಜಿಲ್ಲಾಡಳಿತವು ಸರ್ಕಾರಕ್ಕೆ ಸಲ್ಲಿಸಿದೆ.ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ 956 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ, ಹೊಸದಾಗಿ 27.32 ಎಕರೆ ಬೆಳೆಹಾನಿ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ಪೂರ್ಣಗೊಂಡ ನಂತರ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಮನೆಗಳು ಹಾನಿಗೊಳಗಾಗಿದ್ದು ಅನೇಕರು ಮನೆಗಳನ್ನು ಕಳೆದುಕೊಂಡಿದ್ದಾರೆ. ಮಾತ್ರವಲ್ಲ, ಪರ್ಯಾಯ ವ್ಯವಸ್ಥೆಯಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲಾಡಳಿತವು ಪರಿಹಾರ, ಕಾಳಜಿ ಕೇಂದ್ರ ತೆರೆಯುವ ಭರವಸೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಮಳೆ ಜೋರಾಗಿ ಸುರಿಯುತ್ತಿರುವ ಕಾರಣ ಹಳ್ಳ ಕೊಳ್ಳಗಳು, ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಇದು ರೈತರ ಆತಂಕಕ್ಕೂ ಕಾರಣವಾಗಿದೆ. ಮುಂಗಾರು ಮಳೆ ಆರ್ಭಟದ ಬಳಿಕ ಹಿಂಗಾರು ಮಳೆಯೂ ಹೆಚ್ಚಾಗಿ ಸುರಿಯುತ್ತಿದ್ದು, ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿರುವುದರಿಂದ ಪ್ರವಾಹ ಭೀತಿಯು ಜಾಸ್ತಿಯಾಗಿದೆ.ಬೆಳೆ ಹಾನಿಯಾದ ರೈತರಿಗೆ ಕೃಷಿ ಇಲಾಖೆಯವರು ಯಾವುದೇ ಅನ್ಯಾಯವಾಗದಂತೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ವಿಶೇಷವಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಮಳೆಯಿಂದ ಹಾನಿಗೊಳಗಾದ ಬೆಳೆಗಳ ಸರ್ವೇ ನಡೆಸಿ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಯಾ ತಾಲೂಕು ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.