ನೀರು,ತ್ಯಾಜ್ಯ ಸಮಸ್ಯೆ ಬಗೆಹರಿಯದೆ ಅಭಿವೃದ್ಧಿ ಸಾಧ್ಯವಿಲ್ಲ: ವೋಹ್ರಾ

ಬೆಂಗಳೂರು:ನೀರು ಹಾಗೂ ತ್ಯಾಜ್ಯ ಸಮಸ್ಯೆಗಳನ್ನು ಬಗೆಹರಿಸದ ಹೊರತು ವಿಶ್ವದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ದೆಹಲಿಯ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯದ ಉಪಕುಲಪತಿ ನಿಹಾರಿಕಾ ವೋಹ್ರಾ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಸಿಡೇದಹಳ್ಳಿಯ ಸೌಂದರ್ಯ ನಗರದಲ್ಲಿರುವ ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಕಾಲೇಜು ಸಭಾಂಗಣದಲ್ಲಿ ೨೦೨೧-೨೨ ನೇ ಸಾಲಿನಲ್ಲಿ ಪದವಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ವೋಹ್ರಾ ಮಾತನಾಡುತ್ತಿದ್ದರು.
ಪ್ರಪಂಚ ನೀರು,ತ್ಯಾಜ್ಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ, ಇದರ ನಡುವೆ ಅಭಿವೃದ್ಧಿಯ ಗುರಿ ಹೊಂದಿದ್ದೇವೆ.ಸಮಸ್ಯೆಗಳು ಬಗೆಹರಿಯದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ ಎಂದು ನಿಹಾರಿಕಾ ವೋಹ್ರಾ ಹೇಳಿದರು. ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಕೌಶಲ್ಯ ತರಬೇತಿ ಅತೀ ಮುಖ್ಯ ಎಂದು ಅವರು ತಿಳಿಸಿದರು.
ದೆಹಲಿ ಶಾಸಕಿ ಅತಿಶಿ ಸಿಂಗ್ ಮಾತನಾಡಿ ಪದವಿ ವ್ಯಾಸಂಗ ಮುಗಿಸಿ ಹೊರಬರುವ ವಿದ್ಯಾರ್ಥಿಗಳಲ್ಲಿ ನಾನಾ ರೀತಿಯ ಕನಸುಗಳು ಗರಿಗೆದರುತ್ತವೆ.ಕನಸುಗಳನ್ನು ನನಸು ಮಾಟಿಕೊಳ್ಳುವ ಭರದಲ್ಲಿ ದೇಶಕ್ಕೆ ಏನಾದರೂ ಸೇವೆ ಸಲ್ಲಿಸಬೇಕು ಎಂಬುದನ್ನು ಮರೆಯಬಾರದು ಎಂದು ಕರೆ ನೀಡಿದರು.
ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರೂ ಭಾರತ ಇನ್ನೂ ಅಭಿವೃದ್ಧಿ ಕಾಣುತ್ತಿರುವ ದೇಶ ಯಾಕೆ? ವಿಶ್ವದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಭಾರತೀಯರು ಮುಂಚೂಣಿಯಲ್ಲಿದ್ದಾರೆ ಆದರೂ ಭಾರತ ಅಭಿವೃದ್ಧಿ ಕಾಣುತ್ತಿರುವ ದೇಶ.ಈ ಸಂದರ್ಭದಲ್ಲಿ ದೇಶದ ೧೩೪ ಕೋಟಿ ಭಾರತೀಯರು ಭಾರತವನ್ನು ವಿಶ್ವದ ನಂ.೧ ದೇಶ ಮಾಡಬೇಕೆಂದು ಪಣ ತೊಡಬೇಕಿದೆ ಎಂದು ಶಾಸಕಿ ಅತಿಶಿ ಸಿಂಗ್ ಮನವಿ ಮಾಡಿದರು.
ಈ ಸಮಾರಂಭದಲ್ಲಿ ಬಿಎಸ್ ಸಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ರಾಮ್ ಕುಮಾರ್, ಬಿಸಿಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಕಾವ್ಯ ಆರ್,ಬಿಬಿಎ ಪದವಿಯಲ್ಲಿ ೯ ನೇ ರ್ಯಾಂಕ್ ಗಳಿಸಿದ ಆರತಿ ಪಟೇಲ್,ಬಿಕಾಂ ಪದವಿಯನ್ನು ಸಂಸ್ಕೃತದಲ್ಲಿ ಮುಗಿಸುವುದಲ್ಲದೆ ಸುವರ್ಣ ಪದಕ ಗಳಿಸಿದ ಭರತ್ ಕುಮಾರ್ ಸೇರಿದಂತೆ
೪೦೦ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.ಜೊತೆಗೆ ಓಟದ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸುವರ್ಣ ಪದಕ ಗಳಿಸಿದ ಶಶಿಕಾಂತ್ ಅಂಗಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೌಂದರ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸೌಂದರ್ಯ ಪಿ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಇಓ ಕೀರ್ತನ್ ಕುಮಾರ್, ನಿರ್ದೇಶಕರಾದ ಸುನಿತಾ,ಡಾ.ಪ್ರತೀಕ್ಷಾ,ಡಾ.ಸೆಂಥಿಲ್ ಕುಮಾರ್ ,ಪ್ರಾಂಶುಪಾಲ ಡಾ.ಸುರೇಶ್ ಹೆಗಾಡಿ ಉಪಸ್ಥಿತರಿದ್ದರು. ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮ ಸಾಕ್ಷೀಕರಿಸಿದರು.