ನೀರಿಲ್ಲದೇ ಬಾಡಿದ ರಸ್ತೆ ಮಧ್ಯೆದ ಸಾಲು ಗಿಡಗಳು

ರಾಯಚೂರು.ಏ.೦೩- ಹಸಿರು ಮತ್ತು ಸೌಂದರ್ಯೀಕರಣ ಉದ್ದೇಶದಿಂದ ನಗರದ ರಸ್ತೆ ಮಧ್ಯೆ ಹಾಕಲಾದ ಗಿಡಗಳಿಗೆ ನಗರಸಭೆಯಿಂದ ನೀರು ಪೂರೈಸದಿರುವುದರಿಂದ ಬಹುತೇಕ ಗಿಡಗಳು ಬಿಸಿಲಿಗೆ ಒಣಗಿ ಬೀಳುವ ಹಂತದಲ್ಲಿವೆ.
ನಗರದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ರಸ್ತೆ ಮಧ್ಯೆ ಗಿಡಗಳನ್ನು ಹಾಕಲಾಗಿತ್ತು. ರಾಜಮಂಡ್ರಿಯಿಂದ ಈ ಗಿಡಗಳನ್ನು ಆಮದು ಮಾಡಿಕೊಂಡು ನಗರದ ಸೌಂದರ್ಯೀಕರಣ ಮತ್ತು ಹಸಿರುಕರಣಕ್ಕಾಗಿ ಈ ರಸ್ತೆ ಮಧ್ಯೆ ಗಿಡಗಳನ್ನು ನೆಡಲಾಗಿತ್ತು. ಗಿಡಗಳನ್ನು ನೆಟ್ಟ ನಂತರ ಆರಂಭದಿಂದಲೂ ಗೊಂದಲಗಳು ತೀವ್ರವಾಗಿದ್ದವು. ಆದರೂ, ರಸ್ತೆಯ ಮಧ್ಯೆ ಈ ಗಿಡಗಳನ್ನು ಹಾಕಲಾಗಿತ್ತು. ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಈ ಗಿಡಗಳಿಗೆ ನೀರು ಹಾಕುವ ಪ್ರಕ್ರಿಯೆ ಕೈಗೊಳ್ಳದಿರುವುದರಿಂದ ವೀರಶೈವ ಕಲ್ಯಾಣ ಮಂಟಪದಿಂದ ಚಂದ್ರಮೌಳೇಶ್ವರ ವೃತ್ತ, ಸ್ಟೇಷನ್ ರಸ್ತೆ ಮಧ್ಯದ ಗಿಡಗಳು ಸಂಪೂರ್ಣ ಬಾಡಿ ಹೋಗಿವೆ.
ನಗರಸಭೆಯಿಂದ ಹಾಕಲ್ಪಟ್ಟ ಈ ಗಿಡಗಳನ್ನು ಸಂರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಿಸುತ್ತಿಲ್ಲ. ಬಿಸಿಲಿನ ತಾಪಮಾನ ೪೦ ಡಿಗ್ರಿಗೂ ಅಧಿಕವಾಗಿದೆ. ದಿನಕ್ಕೆ ಮೂರು ಸಲ ನೀರು ಹಾಕಿದರೂ, ಗಿಡಗಳು ಉಳಿಯುವುದೇ ಕಷ್ಟ ಇಂತಹ ಪರಿಸ್ಥಿತಿಯಲ್ಲಿ ಇವುಗಳನ್ನೇ ನೀರನ್ನು ಹಾಕದೇ, ಬಿಸಿಗೆ ಬಿಟ್ಟರೇ, ಏನಾಗಬಹುದು ಎನ್ನುವುದನ್ನು ಈ ಗಿಡಗಳನ್ನು ಕಂಡಾಗ ಚಿತ್ರಣ ಕಣ್ಣು ಮುಂದೆ ಬರುತ್ತದೆ. ಕೆಲ ನಗರಸಭೆ ಅಧಿಕಾರಿಗಳಿಗೆ ಈ ಗಿಡಗಳ ಸಂರಕ್ಷಣೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ ಎನ್ನುವ ಕಾರಣಕ್ಕೆ ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದರು.
ಖುದ್ಧಾಗಿ ಗಿಡಗಳನ್ನು ಪರಿಶೀಲಿಸಿದಾಗ ಬಹುತೇಕ ಕಡೆ ಸೌಂದರ್ಯದ ಗಿಡಗಳು ಹಸಿರು ಬಣ್ಣವನ್ನೇ ಕಳೆದುಕೊಂಡು ಬಾಡಿದ ವರ್ಣಕ್ಕೆ ತಿರುಗಿ, ಬೀಳುವ ಹಂತಕ್ಕೆ ಬಂದು ನಿಂತಿವೆ. ನಗರಸಭೆ ಇನ್ನಾದರೂ, ಕಣ್ಣು ತೆರೆದು, ಈ ಗಿಡಗಳ ಸಂರಕ್ಷಣೆಗೆ ಮುಂದಾಗದಿದ್ದರೇ, ಕಳೆದ ನಾಲ್ಕು ತಿಂಗಳುಗಳ ಹಿಂದೆ ಹಾಕಲಾದ ಎಲ್ಲಾ ಗಿಡಗಳು ನೆಲಕ್ಕುರುಳಿ ಬೀಳುವುದು ನಿಶ್ಚಿತ. ನಗರದ ಸೌಂದರ್ಯೀಕರಣಕ್ಕಾಗಿ ಗಿಡಗಳನ್ನು ಹಾಕಿದ ಅಧಿಕಾರಿಗಳು, ನಗರಸಭೆ ಇದರ ಸಂರಕ್ಷಣೆಗೂ ಪರ್ಯಾಯ ವ್ಯವಸ್ಥೆ ಹೊಂದಿದ್ದರೇ, ಬಿಸಿಲಿಗೆ ಗಿಡಗಳು ಸಾಯುವುದಕ್ಕಾಗಿಯೇ ಹಾಕಲಾಗಿದೆಯೇ ಎನ್ನುವ ಅನುಮಾನಕ್ಕೆ ಜನ ಎಡೆಯಾಗಬೇಕಾಗುತ್ತದೆ.
ಕೂಡಲೇ ಈ ಬಗ್ಗೆ ಪರಿಸರ ಅಭಿಯಂತರರು ಮತ್ತು ಪರಿಸರ ವಿಭಾಗ ಗಮನ ಹರಿಸಿ, ಇವುಗಳನ್ನು ರಕ್ಷಿಸುವತ್ತಾ ಗಮನ ಹರಿಸಬೇಕು. ಜನಪ್ರತಿನಿಧಿಗಳು ಸಹ ಈ ಗಿಡಗಳ ಸಂರಕ್ಷಣೆಗೆ ಮುಂದಾಗುವರೇ?.