ನೀರಿನ ಸಮಸ್ಯೆ, ಮೇಯರ್, ಆಯುಕ್ತರ ಕಚೇರಿಗೆ ಮುತ್ತಿಗೆಯ ಎಚ್ಚರಿಕೆ

ಸಂಜೆವಾಣಿ ವಾರ್ತೆ

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡುಗಳಲ್ಲಿ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಾರ್ಡುಗಳ ಜನತೆ ಜತೆ ಪಾಲಿಕೆಯ ಮಹಾಪೌರರು, ಆಯುಕ್ತರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಪಾಲಿಕೆ ಎಲ್ಲಾ ವಾರ್ಡುಗಳ ಸದಸ್ಯರು ಪಕ್ಷಬೇಧ ಮರೆತು ಎಚ್ಚರಿಕೆ ನೀಡಿದರು. ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಡೆಸ ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಪ್ರತಿಧ್ವನಿಸಿತು. ಆಡಳಿತ ಪಕ್ಷದ ಸದಸ್ಯರು ಸೇರಿದಂತೆ ವಿಪಕ್ಷದ ಸದಸ್ಯರು ನೀರಿನ ಸಮಸ್ಯೆ ಕುರಿತು ಗಂಭೀರ ಚರ್ಚೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಬಿ.ಹೆಚ್.ವಿನಾಯಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ವಿಚಾರವೇ ಕುರಿತಂತೆ 45 ವಾರ್ಡುಗಳ ಸದಸ್ಯರು ತಮ್ಮ ವಾರ್ಡುಗಳ ಸಮಸ್ಯೆ ಹಂಚಿಕೊಂಡರು. ಈ ಕುರಿತು ಸಮಗ್ರ ಕುಡಿಯುವ ನೀರಿನ ಯೋಜನೆ ಸಿದ್ದಪಡಿಸಿ ಮಹಾನಗರ ಜನತೆಗೆ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಒಕ್ಕೂರಲ ಮನವಿ ಮಾಡಿದರು.ಆರಂಭದಲ್ಲಿ ಆಡಳಿತ ಪಕ್ಷದ ಸದಸ್ಯ ಎ.ನಾಗರಾಜ್ ಮಾತನಾಡಿ, ಪಾಲಿಕೆಯ ಎಲ್ಲಾ ವಾರ್ಡುಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ವಾರ್ಡಿನ ಜನರಿಗೆ ನೀರು ನೀಡಲು ಒಂದು ಟ್ಯಾಂಕರ್ ನೀರು ತರಿಸಲು ದಿನಗಟ್ಟಲೇ ಕಾಯಬೇಕಾಗುತ್ತದೆ. ಇದರಿಂದಾಗಿ ನಾವುಗಳು ಮತದಾರರ ಬಳಿ ಕೈಲಾಗದವರಂತೆ ಇರಬೇಕಾಗುತ್ತದೆ. ಅಲ್ಲದೇ ಆಯುಕ್ತರು ಹೇಳಿದರೆ ಮಾತ್ರ ಟ್ಯಾಂಕರ್ ನೀರು ತರುವುದಾಗಿ ಟ್ಯಾಂಕರ್ ಡ್ರೈವರ್‍ಗಳು ಹೇಳುತ್ತಾರೆ. ಅಂದ ಮೇಲೆ ಜನಪ್ರತಿನಿಧಿಗಳಾದ ನಮಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಕಾಂಗ್ರೆಸ್ ಸದಸ್ಯ ಅಬ್ದುಲ್ ಲತೀಫ್, ಬಿಜೆಪಿಯ ಶಿವಾನಂದ, ಕೆ.ಚಮನ್‍ಸಾಬ್, ನೀರು ತರುವಂತೆ ಕೇಳಿದರೆ ಉಢಾಪೆಯಿಂದ ಮಾತನಾಡುತ್ತಾರೆ. ಇಲ್ಲವೇ ಏಕವಚನದಲ್ಲಿ ಮಾತನಾಡುತ್ತಾರೆ. ಇದು ಸಾರ್ವಜನಿಕರ ಸಮಸ್ಯೆ. ಆದ್ದರಿಂದ ನೀರಿನ ಸಮಸ್ಯೆ ತಾಂಡವ ಆಗದಂತೆ ಸಿಂಗಲ್ ಪಾಯಿಂಟ್ ಕಾಂಟೆಕ್ಟ್ ಪದ್ದತಿ ಮಾಡಬೇಕೆಂದು ಒತ್ತಾಯಿಸಿದರು.ಈ ವೇಳೆ ಮಾತನಾಡಿದ ಆಯುಕ್ತೆ ರೇಣುಕಾ, ಆಯಾ ವಾರ್ಡುಗಳ ಸಹಾಯಕ ಅಭಿಯಂತರ, ಕಿರಿಯ ಅಭಿಯಂತರರ ಮೂಲಕವೇ ನೀರಿನ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ನಗರದಲ್ಲಿ ನೀರಿನ ಸಮಸ್ಯೆ ಇಲ್ಲ. ನಿಯಮಿತವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ಪಾಲಿಕೆಯ ಎಲ್ಲಾ ಸದಸ್ಯರು ಮೇಜು ಕಟ್ಟುವ ಮೂಲಕ ಸ್ವಾಗತಿಸಿದರು.ಇದಕ್ಕೂ ಮುನ್ನ ದಾವಣಗೆರೆ ಮಹಾನಗರಕ್ಕೆ ನೀರು ಹರಿಸುವ ಕುಂದವಾಡ ಕೆರೆ ಹಾಗೂ ಟಿವಿ ಸ್ಟೇಷನ್ ಕೆರೆಗಳ ಕುರಿತಂತೆ ಆಯುಕ್ತರು ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಕಿರಿಯ ಅಭಿಯಂತರ ಸಚಿನ್, ಕುಂದವಾಡ ಕೆರೆಯಲ್ಲಿ 90 ದಿನಗಳವರೆಗೆ ನೀರು ಹರಿಸಲಾಗುವುದು. ಇದಲ್ಲದೇ ಟಿವಿ ಸ್ಟೇಷನ್ ಕೆರೆಯಲ್ಲಿ 60 ದಿನಗಳಾಗುವಷ್ಟು ನೀರು ಇದೆ. 6 ಮೀಟರ್ ನೀರಿದೆ ಎಂದು ಮಾಹಿತಿ ನೀಡಿದರು.ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಎಸ್.ಟಿ.ವೀರೇಶ್, ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಬಾರದು. ಟಿವಿ ಸ್ಟೇಷನ್ ಕೆರೆಯಲ್ಲಿ ಕೇವಲ 4.5ಮೀಟರ್ ನೀರಿದೆ ಎಂದರು. ಈ ವೇಳೆ ಸಚಿನ್ ಮಾತನಾಡಿ, 1.5 ಅಡಿಯಷ್ಟು ಹೂಳು ತುಂಬಿದೆ ನಿಮಗೆ ಗೊತ್ತಿಲ್ಲ ಎಂದಾಗ, ಪಾಲಿಕೆಯ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪಕ್ಷಾತೀತವಾಗಿ ಅಧಿಕಾರಿಯ ವರ್ತನೆ ಖಂಡಿಸಿದರು. ಆಗ ಸದಸ್ಯರು ನೀವು ಕೇವಲ ಮಾಹಿತಿ ನೀಡಬೇಕು. ಸ್ಪಷ್ಟೀಕರಣ ನೀಡಬೇಡಿ ಎಂದರು. ಈ ವೇಳೆ ಮಧ್ಯ ಪ್ರವೇಶಿದ ಆಯುಕ್ತೆ, ಅವರು ಕಾರವಾರದ ಕಡೆಯವರು ನೇರ ನುಡಿಯವರು ಎಂದರು. ಆಗ ಮತ್ತಷ್ಟು ಉದ್ವೇಗಗೊಂಡ ಎಸ್.ಟಿ.ವೀರೇಶ್, ದಾವಣಗೆರೆ ಭಾಷೆ ಕಾರವಾರಕ್ಕಿಂತಲೂ ನೇರ, ಒರಟು ನಾವು ಆ ರೀತಿ ಮಾತನಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ವೀರೇಶ್ ಮಾತಿಗೆ ಎಲ್ಲರೂ ದನಿಗೂಡಿಸಿದರು.