ನೀರಿನ ಸಮಸ್ಯೆ ಪರಿಹಾರಕ್ಕೆ ದೂರು

ಕೋಲಾರ, ಜೂ. ೨೪:ವೇಮಗಲ್ ಸಮೀಪದ ಮದ್ದೇರಿ ಗ್ರಾಮ ಪಂಚಾಯತಿ ಕದರಿಪುರ ಗ್ರಾಮದಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿಗೆ ಬಂದಿದೆ ಎಂದು ಪೊಲೀಸ್ ಚಲಪತಿ ದೂರಿದ್ದಾರೆ.
ಸರ್ಕಾರದಿಂದ ಕೊರೆದಿರುವ ಕುಡಿಯುವ ನೀರಿನ ಬೋರ್‌ವೆಲ್‌ನಿಂದ ಒಂದು ಕಿಲೋಮೀಟರ್ ದೂರದಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಿದ್ದು ಇದರ ಪಕ್ಕದಲ್ಲಿ ಮರಗಳು ಹೆಚ್ಚಾಗಿದ್ದು ಅದರ ಮೇಲೆ ಮರದ ಕೊಂಬೆಗಳು ಬೀಳುವುದರಿಂದ ಪದೇ ಪದೇ ಟಿ.ಸಿ ಮತ್ತು ಬೋರ್‌ವೆಲ್ ಸುಟ್ಟು ಹೋಗುತ್ತಿದೆ.
ಇದರ ಬಗ್ಗೆ ಸತತ ಒಂದು ವರ್ಷದಿಂದ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಪಡಿಸಿಲ್ಲ. ಇದರಿಂದ ಗ್ರಾಮದಲ್ಲಿ ಪದೇಪದೇ ಕುಡಿಯುವ ನೀರಿಗೆ ತೊಂದರೆಯಾಗಿದ್ದು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.