ಮಂಗಳೂರು,ಜೂ.೭-ಈ ಬಾರಿ ರಾಜ್ಯದಲ್ಲಿ ಮುಂಗಾರು ಆಗಮನ ವಿಳಂಬವಾದ ಹಿನ್ನೆಲೆ, ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಅದರಲ್ಲೂ ಕರಾವಳಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದರಿಂದ ಮನೆ, ಕಚೇರಿ, ಶಾಲಾ-ಕಾಲೇಜುಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಹೀಗಾಗಿ ಜಿಲ್ಲೆಯ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿವೆ. ಇನ್ನು ಕೆಲವೆಡೆ ಶಿಕ್ಷಣ ಸಂಸ್ಥೆಗಳು ಅರ್ಧ ದಿನ ತರಗತಿ ನಡೆಸುತ್ತಿವೆ. ಕಾಲೇಜು ವಿದ್ಯರ್ಥಿಗಳಿಗೆ ಆನ್ ಲೈನ್ ಮೂಲಕವೇ ಪಾಠಗಳನ್ನು ಮಾಡಲಾಗುತ್ತಿದೆ.
ನೀರಿನ ಕೊರತೆಯಿಂದಾಗಿ ಮಂಗಳೂರು ಉತ್ತರ ಹಾಗೂ ಮಂಗಳೂರು ನಗರ ಭಾಗಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಜೊತೆಗೆ ಕಳೆದ ಎರಡು ದಿನಗಳಿಂದ ನೀರಿನ ಪೈಪ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಮಂಗಳೂರು ಭಾಗದಲ್ಲಿ ನೀರು ಪೂರೈಕೆ ವ್ಯತ್ಯಯವಾಗಿದೆ.
ವಿಶೇಷವಾಗಿ ಮಂಗಳೂರು ಉತ್ತರ ಹಾಗೂ ದಕ್ಷಿಣ ವಲಯದ ಶಾಲೆಗಳಿಗೂ ನೀರಿನ ಕೊರೆತೆ ಕಾಣಿಸಿಕೊಂಡಿದ್ದು, ಇಲಾಖೆಯ ಪ್ರಕಾರ ಮೂಲ್ಕಿ ಮೂರು ಶಾಲೆಗಳಿಗೆ ಮತ್ತು ವಿಟ್ಲದ ಒಂದು ಶಾಲೆಯಲ್ಲಿ ವಾರಕ್ಕೊಂದು ಬಾರಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇದರಿಂದ ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.