ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲು ಸೂಚನೆ

ಹಾವೇರಿ:ಏ.17: ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ. ಕೋವಿಡ್ ಹೆಚ್ಚಳವಾಗಿರುವುದರಿಂದ ಸೋಂಕಿತರ ಚಿಕಿತ್ಸೆ ತೊಂದರೆಯಾಗದಂತೆ ಕ್ರಮವಹಿಸಿ. ಕೋವಿಡ್ ನಿಯಂತ್ರಣಕ್ಕೆ ಆದ್ಯತೆ ವಹಿಸಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಏಕನಾಥ ಭಾನುವಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಮಾರ್ಚ್ ಮಾಹೆ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜಲಜೀವನ ಮಿಷನ್ ಅಡಿ ಪೈಪ್‍ಲೈನ ಕಾರ್ಯ ಪ್ರಗತಿಯಲ್ಲಿದ್ದು, ಹಲವು ಗ್ರಾಮಗಳಲ್ಲಿ ಸರಿಯಾದ ರೀತಿಯಲ್ಲಿ ಸರ್ವೇ ಯಾಗಿಲ್ಲ ಎಂಬ ದೂರುಗಳಿವೆ. ಸಂಬಂಧಿಸಿದ ಇಂಜನೀಯರ ಕುರಿತಂತೆ ಕ್ರಮವಹಿಸಿ ಸಮಸ್ಯೆ ನಿವಾರಣೆಮಾಡಲು ಸೂಚಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಏಜೆನ್ಸಿಗಳಿಗೆ ಹಣ ನೀಡಲಾಗುತ್ತಿದೆ. ಆದರೂ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ದುರಸ್ಥಿಯಲ್ಲಿರುವ ಶುದ್ಧ ನೀರಿನ ಘಟಕಗಳ ರಿಪೇರಿಗೆ ಸಂಬಂಧಪಟ್ಟ ಏಜೆನ್ಸಿಗಳಿಗೆ ತಾಕೀತು ಮಾಡುವಂತೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಅವರು ಜಿಲ್ಲೆಯ ತಾಲೂಕುಗಳ ಕಾರ್ಯನಿರ್ವಹಕ ಅಭಿಯಂತರರೊಂದಿಗೆ ನೀರಿನ ಅಭಾವವಿರುವ ಗ್ರಾಮಗಳ ಕುರಿತು ಚರ್ಚಿಸಲಾಗುವುದು. ಜಿಲ್ಲಾ ಪಂಚಾಯತ್ ಸದಸ್ಯರು ಒಂದು ವಾರದೊಳಗೆ ಇಂತಹ ಗ್ರಾಮಗಳ ಪಟ್ಟಿ ನೀಡಿದಲ್ಲಿ ಟಾಸ್ಕ್‍ಪೋರ್ಸ್ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ 372 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. 306 ಟೆಂಡರ್ ಪೋರ್ಟ್ ಮಾಡಲಾಗಿದೆ ಹಾಗೂ 162 ವರ್ಕ ಆರ್ಡರ್ ನೀಡಲಾಗಿದೆ. 62 ಕಾಮಗಾರಿಗೆ ರೀ ಟೆಂಡರ್ ಕರೆಯಲಾಗಿದೆ. 3ನೇ ಸಲ ಟೆಂಡರ್ ಕರೆದಲ್ಲಿ ಯಾವುದೇ ಟೆಂಡರ್ ಬಾರದಿದ್ದಲ್ಲಿ ಮೂರರಿಂದ ನಾಲ್ಕು ಕಾಮಗಾರಿಗಳನ್ನು ಸೇರಿಸಿ ಒಂದು ಪ್ಯಾಕೇಜ್ ಮಾಡಿ ಟೆಂಡರ್ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಪ್ರಕರಣಗಳು ಹೆಚ್ಚಾಗಿರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕೋವಿಡ್ ಪಾಸಿಟಿವ್ ವ್ಯಕ್ತಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಬೇಕು. ಲಸಿಕೆ ನೀಡುವ ಪ್ರಮಾಣ ಹಾಗೂ ತಪಾಸಣಾ ಪ್ರಮಾಣ ಹೆಚ್ಚಳಮಾಡಬೇಕು. ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಬೇಕು. ಜನರಲ್ಲಿ ಮಾಸ್ಕಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾಗೃತಿ ಮೂಡಿಸಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೋವಿಡ್ ಮಾನದಂಡಂತೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆ ಕುರಿತು ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಬಿ.ಮಳ್ಳಳ್ಳಿ ಅವರು 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 45 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ. 42 ಹೊಸ ಕೆರೆ ನಿರ್ಮಾಣ, 67 ಕೆರೆಗಳ ಸಂರ್ದೌಯೀಕರಣ, ಗೋಕಟ್ಟೆ ಸೇರಿದಂತೆ 262 ಜಲ ಮೂಲಗಳ ಪುನಶ್ಚೇತ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಜಿ.ಪಂ. ಯೋಜನಾಧಿಕಾರಿ ನಿರ್ಮಲಾ ಎನ್. ಕೆ., ಉಪಸ್ಥಿತರಿದ್ದರು.