ನೀರಿನ ಮೂಲಗಳ ಉಳಿಸುವ ಅನಿವಾರ್ಯತೆ ಎದುರಾಗಿದೆ

ದಾವಣಗೆರೆ.ಏ.೨೪: ಮಾನವ ಬುದ್ದಿವಂತ ಆದಂತೆ ಮಣ್ಣಿನ ದುರ್ಬಳಕೆ ಹೆಚ್ಚಾಗುತ್ತಿದೆ. ಒಂದು ವೇಳೆ ಮಾನವನಿಗೆ ಪರಿಜ್ಞಾನ ಇದ್ದರೆ ಮೊದಲು ಮಣ್ಣನ್ನು ಉಳಿಸುವ ಪಯತ್ನ ಮಾಡಬೇಕು. ಜತೆಗೆ ನೀರಿನ ಮೂಲಗಳನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಡಾ.ಹೆಚ್. ಲಕ್ಷ್ಮೀಕಾಂತ್ ಕರೆ ನೀಡಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ದಾವಣಗೆರೆ, ಬಿಇಎ ಶಿಕ್ಷಣ ಮಹಾವಿದ್ಯಾಲಯ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ   ಆಯೋಜಿಸಲಾಗಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೀರು, ಮಣ್ಣು, ಅರಣ್ಯದಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಮಾಹಿತಿ ನೀಡಿದರು.ನಾವು ಏನಾದರೂ ಕಾಪಾಡಬೇಕೆಂದರೆ ಧರ್ಮ, ಜಾತಿ, ಭಾಷೆ ಬಗ್ಗೆ ಮಾತನಾಡಿದರೆ ಅದು ಬೇರೆ ಅರ್ಥ ‌ಪಡೆಯುತ್ತದೆ. ಆಚರಣೆಯ ಹೆಸರಿನಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಅಮೂಲ್ಯ ಮಣ್ಣನ್ನು ಗಣಪತಿ ಮೂರ್ತಿಗಳನ್ನು ಸಮುದ್ರಕ್ಕೆ ಹಾಕುವ ಮೂಲಕ ಪೋಲು ಮಾಡಲಾಗುತ್ತಿದೆ. ಸಮುದ್ರಕ್ಕೆ ಹಾಕುವ ಬದಲು ನಮ್ಮ ಸುತ್ತಮುತ್ತಲಿನ ಕೆರೆ ಕಟ್ಟೆಗಳಿಗೆ ಹಾಕಿದರೆ ಜಲಚರಗಳಿಗೆ ಅನುಕೂಲ ಅಗಲಿದೆ ಎಂದು ಹೇಳಿದರು.ನಮಗೆ ಅಯುಸ್ಸು, ಆರೋಗ್ಯ ಹೆಚ್ಚಾಗಬೇಕಾದರೆ ಕೃತಕ ಲೋಹಗಳ ಮೋಹ ಬಿಡಬೇಕು. ಅದರ ಬದಲಿಗೆ ನೀರು, ಮಣ್ಣಿನಂತಹ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮಾಡುವ ಮೂಲಕ ಉತ್ತಮ ಆರೋಗ್ಯ ಪಡೆಯಬಹುದು. ಇದಲ್ಲದೇ ಅಡುಗೆ ಎಣ್ಣೆಯನ್ನು ಬಳಸಿದ್ದನ್ನೇ ಪದೆಪದೇ ಬಳಸಿದರೆ ಕ್ಯಾನ್ಸರ್ ರೋಗ ಬರಲಿದೆ ಎಂದು ತಿಳಿಸಿದರು.