ನೀರಿನ ಮಿತ ಬಳಕೆಯಲ್ಲಿ ಜಾಗೃತರಾಗಬೇಕಿದೆ: ಡಾ. ಇಂದಿರೇಶ್

ಬಾಗಲಕೋಟೆ: ಮಾ24: ನೀರು ಈ ಭೂಮಂಡಲದ ಜೀವಜಾಲಕ್ಕೆ ಅಗತ್ಯವಾದ ರುಚಿರಹಿತ ದ್ರವ ವಸ್ತು. ಭೂಮಿಯ ಮೇಲ್ಮೈಯ ಶೇ.70 ಭಾಗಗಳಲ್ಲಿ ಕಂಡು ಬರುವ ಈ ನೀರು ಶೇ.3 ರಷ್ಟು ಕಡಿಮೆ ಪ್ರಮಾಣದಲ್ಲಿರುವ ಶುದ್ಧ ನೀರನ್ನು ಮನುಷ್ಯ ಬೇಕಾಬಿಟ್ಟಿಯಾಗಿ ಬಳಸಿರುವುದರಿಂದ ಜಗತ್ತಿನ ಹಲವೆಡೆಗಳಲ್ಲಿ ನೀರಿನ ಕೊರತೆಯಿಂದ ಹಾಹಾಕಾರ ಉಂಟಾಗಿದೆ. ಹೀಗಾಗಿ ಪ್ರಜ್ಞಾವಂತರಾದ ನಾವು ಇಂದು ನೀರನ್ನು ಕುರಿತು ಜಾಗೃತಿ ವಹಿಸಬೇಕಾಗಿದೆ ಎಂದು ಗೌರವಾನ್ವಿತ ಕುಲಪತಿ ಡಾ. ಕೆ. ಎಮ್. ಇಂದಿರೇಶ್ ಅವರು ಅಭಿಪ್ರಾಯ ಪಟ್ಟರು.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯದ ಅಡಿಯಲ್ಲಿ 22 ಮಾರ್ಚ್ 2021 ರಂದು ವಿಶ್ವ ಜಲ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಲಪತಿಗಳು ಈಗಾಗಲೇ ತೋವಿವಿಯಲ್ಲಿ ಅಟಲ್ ಭೂಜಲ್ ಯೋಜನೆಯು ಆರಂಭಗೊಂಡಿದ್ದು. ಅದು ಯಶಸ್ವಿಯತ್ತ ಸಾಗಿದೆ ಎಂದು ಹೇಳಲು ಅಭಿಮಾನವೆನಿಸುತ್ತದೆ. ಬೇಸಿಗೆ ಆರಂಭವಾದ ಹೊತ್ತಿನಲ್ಲಿ ಈಗಾಗಲೇ ಕೆಲವು ಕಡೆ ಕುಡಿಯುವ ನೀರಿನ ಕೊರತೆಯಿಂದ ಬಹಳ ದೂರದಿಂದ ನೀರು ಹೊತ್ತು ತರುವ ಸಂಪನ್ಮೂಲವನ್ನು ಕಾಪಾಡಿಕೊಳ್ಳೋಣ. ಮಳೆ ನೀರು ವ್ಯರ್ಥವಾಗಿ ಹರಿದು ಹೊಗದಂತೆ ತಡೆ ಹಿಡಿಯೋಣ. ಅಂತರ್ಜಲವನ್ನು ಹೆಚ್ಚಿಸೋಣ ಎಂದು ವಿವರಿಸಿದರು.
ಅಧ್ಯಕ್ಷೀಯ ಸಮಾರೋಪ ಭಾಷಣದಲ್ಲಿ ವಿಸ್ತರಣಾ ನಿರ್ದೇಶಕ ಡಾ. ಎಸ್. ಐ. ಅಥಣಿ ಅವರು ಮುಂದಿನ ಜನಾಂಗಕ್ಕೆ ನೀರು ಉಳಿಸಬೇಕೆಂದರೆ ಇಂದು ನಾವು ನೀರನ್ನು ಸಂರಕ್ಷಿಸಲೇಕಾಗಿದೆ. ಜಲಸಂಪತ್ತಿನ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಡಾ. ಎಂ. ಎಸ್. ಕುಲಕರ್ಣಿ, ಶಿಕ್ಷಣ ನಿರ್ದೇಶಕರು, ಡಾ. ಟಿ. ಬಿ. ಅಳ್ಳೊಳ್ಳಿ, ಕುಲಸಚಿವರು, ಡಾ. ಡಿ. ಆರ್. ಪಾಟೀಲ, ಸಂಶೋಧನಾ ನಿರ್ದೇಶಕರು, ಡಾ. ಎಚ್. ಬಿ. ಪಾಟೀಲ, ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟ ಎಲ್ಲ ಗಣ್ಯಮಾನ್ಯರು ನೀರಿನ ಮಹತ್ವತೆಯನ್ನು ಕುರಿತಾಗಿ ಮಾತನಾಡಿದರು.
ಡಾ. ಐ. ಬಿ. ಬಿರಾದಾರ, ಪ್ರಾಧ್ಯಾಪಕರು, ಬೇಸಾಯಶಾಸ್ತ್ರ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಶಶಿಕುಮಾರ ಎಸ್. ಸ್ವಾಗತಿಸಿ ನಿರೂಪಿಸಿದರು. ಡಾ. ಕಾಂತೇಶ ಗಾಂಡೋಳಕರ ವಂದಿಸಿದರು.
ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.