ನೀರಿನ ಬಾಟಲಿ ಮೇಲೆ ರಾಷ್ಟ್ರಧ್ವಜದ ಬಣ್ಣ ವಿರೋಧಿಸಿ ಪ್ರತಿಭಟನೆ

ಕಲಬುರಗಿ.ಜು.06: ಇಂಡಿಪೆಂಡೆನ್ಸ್ ಕಣ್, ಕಣ್ ಮೇನ್ ಭಾರತ್ ಎಂಬ ನೀರಿನ ಬಾಟಲಿಗಳ ಮೇಲೆ ದೇಶದ ಬಣ್ಣ ಹಾಕಿ ಅವಮಾನ ಮಾಡುತ್ತಿದ್ದು, ಕೂಡಲೇ ರಾಷ್ಟ್ರಧ್ವಜದ ಬಣ್ಣವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸ್ವತಂತ್ರ ಕಣ್, ಕಣ್ ಮೇನ್ ಭಾರತ ಹೆಸರಿನ ನೀರಿನ ಬಾಟಲಿಗಳ ಮೇಲೆ ದೇಶದ ಧ್ವಜದ ಬಣ್ಣ ಹಾಕಿ ಅವಮಾನಗೊಳಿಸಿದ್ದಾರೆ. ನೀರಿನ ಬಾಟಲಿಗಳನ್ನು ಬಳಸಿದ ನಂತರ ಜನರು ಚರಂಡಿ ಹಾಗೂ ಕಸ ಹಾಕುವ ಪ್ರದೇಶಗಳಲ್ಲಿ ಎಸೆದುಹೋಗುತ್ತಾರೆ. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಭಾರತ ದೇಶದಲ್ಲಿ ವಾಸಿಸುವವರೆಲ್ಲರೂ ಇಂತಹ ಕೃತ್ಯದಿಂದ ಅಪಮಾನ ಅನುಭವಿಸುತ್ತಿದ್ದಾರೆ. ಕೂಡಲೇ ನೀರಿನ ಬಾಟಲಿಗಳ ಕಂಪೆನಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಆ ಕಂಪೆನಿಯ ಪರವಾನಿಗೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಕೂಡಲೇ ನೀರಿನ ಬಾಟಲಿಗಳ ಮೇಲೆ ಇರುವ ರಾಷ್ಟ್ರಧ್ವಜದ ಬಣ್ಣವನ್ನು ತೆಗೆದುಹಾಕಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್. ಫರತಾಬಾದ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುರೇಶ್ ಹನಗುಡಿ, ಅಕ್ಷಯ್, ನವೀನ್, ಸಾಯಿಕುಮಾರ್ ಶಿಂಧೆ, ಪ್ರವೀಣ್ ಸಿಂಧೆ ಮುಂತಾದವರು ಪಾಲ್ಗೊಂಡಿದ್ದರು.