ನೀರಿನ ಟ್ಯಾಂಕ್ ಬಿದ್ದು ೩ ಸಾವು

ಬೆಂಗಳೂರು,ಆ.೩-ಗೋಡೆ ಕುಸಿದು ನಾಲ್ಕು ಮಹಡಿಯ ಕಟ್ಟಡದ ಮೇಲಿಂದ ನೀರಿನ ಸಿಂಟೆಕ್ಸ್ ಟ್ಯಾಂಕ್ ಕುಸಿದು ಎಗ್‌ರೈಸ್ ಅಂಗಡಿ ಮೇಲೆ ಬಿದ್ದು ಮೂವರು ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಶಿವಾಜಿನಗರದ ಬಸ್ ನಿಲ್ದಾಣದ ಬಳಿ ನಿನ್ನೆ ರಾತ್ರಿ ನಡೆದಿದೆ.
ರಾತ್ರಿ ಊಟಕ್ಕೆ ಎಗ್‌ರೈಸ್ ಅಂಗಡಿಗೆ ಬಂದಿದ್ದ ಅರುಳ್ (೪೦) ಕೋಟಾ ನಾಗೇಶ್ವರರಾವ್(೩೨)ಹಾಗೂ ಕರಣ್ ತಾಪ(೩೨) ಮೃತಪಟ್ಟವರು.
ಎಗ್ ರೈಸ್ ಅಂಗಡಿ ಮಾಲೀಕ ದಾಸ್ ಹಾಗೂ ಊಟಕ್ಕೆ ಬಂದಿದ್ದ ಕಪಿಲ್ ಗಾಯಗೊಂಡಿದ್ದು ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರಲ್ಲಿ ಗಂಭೀರವಾಗಿ ಗಾಯಗೊಂಡಿರುವ ದಾಸ್ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಮೃತರಲ್ಲಿ ಅರುಳ್ ತಮಿಳುನಾಡು ಮೂಲದವರಾಗಿದ್ದು ಶಿವಾಜಿನಗರದಲ್ಲಿ ತರಕಾರಿ ವ್ಯಾಪಾರಿ ಮಾಡುತ್ತಿದ್ದರೆ,ಆಂಧ್ರಪ್ರದೇಶ ಮೂಲದ ಕೋಟಾ ನಾಗೇಶ್ವರರಾವ್ ಕೂಲಿ ಕೆಲಸ ಮಾಡುತ್ತಿದ್ದರು,ಮತ್ತೊಬ್ಬ ಕರಣ್ ತಾಪ ನೇಪಾಳಿ ಮೂಲದವರಾಗಿದ್ದು ಅವರು ಶಿವಾಜಿನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಶಿವಾಜಿನಗರದ ಬಸ್ ನಿಲ್ದಾಣದ ಬಳಿಯ ಓಕ್ ಫರ್ನಿಚರ್ ಅಂಗಡಿ ಕಟ್ಟಡದ ನಾಲ್ಕು ಅಂತಸ್ತಿನ ಮೇಲಿಟ್ಟಿದ್ದ ಸಿಂಟೆಕ್ಸ್ ವಾಟರ್ ಟ್ಯಾಂಕ್ ಇಡಲಾಗಿತ್ತು,ನಗರದಲ್ಲಿ ಸುರಿದ ಮಳೆ ಹಾಗೂ ಟ್ಯಾಂಕ್ ಕೆಳಭಾಗದ ತೆವದಿಂದ ಗೋಡೆ ತೋಯ್ದಿತ್ತು ನೀರು ಪೂರ್ತಿ ತುಂಬಿಹೋಗಿದ್ದ ಟ್ಯಾಂಕ್ ಭಾರಕ್ಕೆ ಶಿಥಿಲಗೊಂಡಿದ್ದ ಗೋಡೆ ರಾತ್ರಿ ೧೦.೩೦ರ ವೇಳೆ ಏಕಾಏಕಿ ಮುರಿದು ಗೋಡೆ ಟ್ಯಾಂಕ್ ಎರಡೂ ಎಗ್‌ರೈಸ್ ಅಂಗಡಿ ಮೇಲೆ ಬಿದ್ದಿವೆ.ಎರಡೂ ಬಿದ್ದ ರಭಸಕ್ಕೆ ಕ್ಷಣಾರ್ಧದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಇದೇ ವೇಳೆ ಸಮೀಪದಲ್ಲಿದ್ದ ಅಂಗಡಿ ಮಾಲಕ ದಾಸ್,ಕರಣ್ ತಾಪ.

ಶಿವಾಜಿನಗರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಗೋಡೆ ಕುಸಿದು ಎಗ್‌ರೈಸ್ ಅಂಗಡಿ ಮೇಲೆ ಬಿದ್ದಿರುವುದು.

ಹಾಗೂ ಕಪಿಲ್ ತೀವ್ರ ಗಾಯಗೊಂಡಿದ್ದು ಸ್ಥಳೀಯರ ಸಹಾಯದಿಂದ ಅವರನ್ನು ತಕ್ಷಣ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಂಭೀರವಾಗಿ ಗಾಯಗೊಂಡಿದ್ದ ಕರಣ್ ತಾಪ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕಟ್ಟಡದ ಮೇಲೆ ಓವರ್ ಟ್ಯಾಂಕ್ ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಬಿಡಿಎ ಅಧಿಕಾರಿಗಳಿಂದ ಪರೀಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.