ನೀರಿನ ಟ್ಯಾಂಕ್ ನೆಲಸಮಕ್ಕೆ ಗ್ರಾಮಸ್ಥರು ಆಗ್ರಹ

ಬಲಿಗಾಗಿ ಕಾದು ನಿಂತ ನೀರಿನ ಟ್ಯಾಂಕ್ !
ಹುಸೇನಪ್ಪ ಗಂಜಳ್ಳಿ
ರಾಯಚೂರು, ಏ.೨೩- ಗ್ರಾಮೀಣ ಪ್ರದೇಶದ ಜನರಿಗೆ ಜಲದಾಹ ನೀಗಿಸುವ ಉದ್ದೇಶದಿಂದ ಕಳೆದ ೪೦ ವರ್ಷಗಳ ಹಿಂದೆ ಸರ್ಕಾರ ಲಕ್ಷಾಂತರ ರೂ ವ್ಯಯಿಸಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಅವಧಿ ಪೂರ್ಣಗೊಂಡು ಕುಸಿಯುವ ಹಂತದಲ್ಲಿ ನಿಂತಿದೆ. ಇದರಿಂದ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಯದ್ಲಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಹಳ್ಳಿ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಕಳೆದ ೪೦ ವರ್ಷ ಹಿಂದೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿತ್ತು. ಕಳೆದ ೫ ವರ್ಷಗಳಿಂದ ನೀರಿನ ಟ್ಯಾಂಕ್ ಸಂಪೂರ್ಣ ಶಿಥಲಗೊಂಡು ಬಲಿಗಾಗಿ ಕಾದು ನಿಂತಿದೆ. ಶಾಲೆಯ ಆವರಣದಲ್ಲಿ ಇರುವದರಿಂದ ಶಾಲೆಯ ಮಕ್ಕಳು ಭಯಭೀತರಾಗಿದ್ದಾರೆ. ಟ್ಯಾಂಕ್ ಸಂಪೂರ್ಣ ನೆಲಸಮ ಮಾಡುವಂತೆ ಗ್ರಾಮಸ್ಥರು ಒತ್ತಾಯವಿದೆ.
ಓವರ್ ಹೆಡ್ ಟ್ಯಾಂಕ್ ಕುಸಿಯುವ ಸಂಭವ:
ಒಂದು ಲಕ್ಷ ಲೀಟರ್ ನೀರು ಹೊತ್ತು ನಿಂತ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡು ಸೋರುತ್ತಿದೆ. ಪರಿಣಾಮ ಅಮೂಲ್ಯ ಜೀವಜಲ ಪೋಲಾಗುತ್ತಿದೆ. ನೀರಿನ ಟ್ಯಾಂಕ್ ಅವಧಿ ಪೂರ್ಣಗೊಂಡಿದ್ದು ಟ್ಯಾಂಕ್‌ನ ಪಿಲ್ಲರ್‌ಗಳಿಗೂ ಹಾನಿಯಾಗಿವೆ. ಟ್ಯಾಂಕ್‌ನ ಆಧಾರ ಸ್ತಂಭಗಳು ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿದೆ. ಬಿರುಕು ಬಿಡುತ್ತ ಬರುತ್ತಿವೆ. ಆಗಲೋ ಈಗಲೋ ಎನ್ನುವ ರೀತಿಯಲ್ಲಿ ಬೀಳುವ ಹಂತ ತಲುಪಿದ್ದು ಜನರಲ್ಲಿ ಆತಂಕ ನಿರ್ಮಾಣವಾಗಿದೆ.
ಅಧಿಕಾರಿಗಳು ನಿರ್ಲಕ್ಷ : ನೀರಿನ ಟ್ಯಾಂಕ್ ಸಂಪೂರ್ಣ ಶಿಥಲಗೊಂಡಿರುವದರಿಂದ ಕುಸಿಯುವ ಸಂಭವ ಹೆಚ್ಚಿದೆ. ಈ ಬಗ್ಗೆ ಅನೇಕ ಭಾರಿ ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಬೇಕಾದ ಅಧಿಕಾರಿಗಳು ಜಾಣತನ ಕುರುಡತನ ಪ್ರದರ್ಶಸುವುದಲ್ಲದೇ ಒಮ್ಮೆಯೂ ಭೇಟಿ ನೀಡಿಲ್ಲ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಟ್ಯಾಂಕ್ ದಿನದಿಂದ ದಿನಕ್ಕೆ ಕುಸಿಯುವ ಭೀತಿ ಎದುರಿಸುತ್ತಿದೆ. ಸಂಪೂರ್ಣ ಹಾಳಾದ ಟ್ಯಾಂಕ್ ನಾಶಪಡಿಸಿಬೇಕೆಂದು ಗ್ರಾಮಸ್ಥರು ಆಗ್ರಹವಿದೆ.
ವಿದ್ಯಾರ್ಥಿಗಳು ಓಡಾಡುವ ಜಾಗ: ಟ್ಯಾಂಕ್ ಸಮೀಪ ಎರಡು ಶಾಲೆಗಳು ಒಂದು ಅಂಗನವಾಡಿ ಕೇಂದ್ರವಿದೆ. ಟ್ಯಾಂಕ್ ಪಕ್ಕದಲ್ಲೇ ಮಕ್ಕಳು ಓಡಾಡುತ್ತಾರೆ. ನೂರಾರು ಮಕ್ಕಳು ಟ್ಯಾಂಕಿನ ಪಕ್ಕದಲ್ಲಿ ಆಟವಾಡುತ್ತಾರೆ. ಟ್ಯಾಂಕ್ ಕುಸಿದು ಬಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಮಕ್ಕಳ ಪ್ರಾಣಕ್ಕೆ ತೊಂದರೆಯಾದರೆ ಯಾರು ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

(ಬ್ಯಾಕ್ಸ್)

ಓವರ್ ಹೆಡ್ ಟ್ಯಾಂಕ್ ಪರಿಶೀಲನೆ ಮಾಡಲಾಗಿದೆ. ಅಪಾಯದ ಹಂತದ
ಕುರಿತು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಶೀಘ್ರದಲ್ಲಿ ಅವರನ್ನು ಕರೆಯಿಸಿ,
ಪರಿಶೀಲನೆ ಮಾಡಿಸಿ ನೆಲಸಮಗೊಳಿಸಲು ಪ್ರಯತ್ನ ಮಾಡುತ್ತೇನೆ.
ಚನ್ನಮ್ಮ ಪಿಡಿಓ ಯದ್ಲಾಪೂರು ಪಂಚಾಯಿತಿ

(ಬ್ಯಾಕ್ಸ್ )

ಗ್ರಾಮದಲ್ಲಿಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ಇಂದೋ ನಾಳೆಯೋ ಬೀಳುವ ಹಂತದಲ್ಲಿದೆ. ಇದನ್ನು ನೆಲಸಮ ಮಾಡಲು ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಅಪಾಯದ ಹಂತದಲ್ಲಿ ಇರುವ ನೀರಿನ ಟ್ಯಾಂಕ್ ಅನ್ನು ಶೀಘ್ರದಲ್ಲಿ ನೆಲಸಮಗೊಳಿಸದಿದ್ದರೆ ತಾ ಪಂ ಎದುರು ಪ್ರತಿಭಟನೆ ಮಾಡಲಾಗುವುದು.
ಗ್ರಾಮದ ನಿವಾಸಿ ತಿಮ್ಮಪ್ಪ ಗಂಜಹಳ್ಳಿ