
ಚನ್ನಮ್ಮನ ಕಿತ್ತೂರ,ಏ12: ತಾಲೂಕಿನಲ್ಲಿ 17 ಗ್ರಾಮ ಪಂಚಾಯತಿಗಳಿದ್ದು ಅವುಗಳ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳಿಗೆ ನೀರಿನ ಕೊರತೆಯಾಗದಂತೆ ಮುನ್ನೇಚ್ಚರಿಕೆ ವಹಿಸಬೇಕೆಂದು ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ಸುಭಾಸ್ ಸಂಪಗಾಂವಿ ಹೇಳಿದರು.
ತಾ.ಪಂ. ಸಭಾಭವನದಲ್ಲಿ ಶುದ್ದ ಕುಡಿಯುವ ನೀರಿನ ಪೂರೈಕೆಯ ಟಾಸ್ಕ್ ಪೋರ್ಸ್ ಸಭೆಯ ಮುಖ್ಯ ಅಧ್ಯಕ್ಷರಾಗಿ ಮಾತನಾಡಿದರು. ಎಪ್ರೀಲ್-ಮೇ ತಿಂಗಳಲ್ಲಿ ಬೇಸಿಗೆಯಿದ್ದು ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶುದ್ಧ ಕುಡಿಯುವ ನೀರು ಜನರಿಗೆ ಕೊಡಬೇಕು. ಇದರಲ್ಲಿ ಲೋಪದೋಷಗಳು ಕಂಡುಬಂದರೆ ಸಂಬಂಧಪಟ್ಟ ಆಯಾ ಗ್ರಾ.ಪಂ. ಅಧಿಕಾರಿಗಳೇ ನೇರ ಹೊಣೆಗಾರರು. ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕಾಲ ಕಾಲಕ್ಕೆ ದುರಸ್ತಿಗೊಳಿಸಿ ಅವುಗಳ ಸುತ್ತಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಂಸ್ಕರಣಾ ಘಟಕದ ಮುಖ್ಯ ಭಾಗಗಳನ್ನು ಫಿಲ್ಟರ್ ಕ್ಲೋರಿನೀಕರಣ ಬಾಟಲ್ ಇತ್ಯಾದಿಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಿ ಶುಚಿಗೊಳಿಸಬೇಕು. ಪ್ರತಿದಿನ ಗ್ರಾ.ಪಂ.ಗಳಲ್ಲಿಯ ಸರಿಯಾಗಿ ನೀರು ಪೂರೈಕೆ ಆಗುತ್ತಿರುವುದನ್ನು ತಾ.ಪಂ.ಗೆ ಮಾಹಿತಿ ನೀಡಬೇಕು. ಅದಲ್ಲದೇ ವಿಧಾನಸಭಾ ಚುನಾವಣೆಯಿರುವುದರಿಂದ ಎಲ್ಲರೂ ಚುನಾವಣಾ ಕರ್ತವ್ಯವನ್ನು ಆದ್ಯತೆ ಮೇರೆಗೆ ಮಾಡುವುದರ ಜೊತೆಗೆ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಂಡು ಮತದಾರರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಬೈಲಹೊಂಗಲ ಉಪವಿಭಾಗಾಧಿಕಾರಿ ಅಭಿಯಂತರರು ಎಸ್.ಕೆ. ಮುಖಸಜ್ಜಿ, ಕಿತ್ತೂರ ಹೆಸ್ಕಾಂ ಅಧಿಕಾರಿ ಎಡಬ್ಲೂಎ ಮಹೇಶ್ವರ ಹಿರೇಮಠ, ತಾ.ಪಂ. ಸಹಾಯಕ ಅಧಿಕಾರಿ ಲಿಂಗರಾಜ ಹಲಕರ್ಣಿಮಠ, ಸುರೇಶ ನಾಗೋಜಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾ.ಪಂ. ಮತ್ತು ಗ್ರಾ.ಪಂ. ಸಿಬ್ಬಂದಿಯವರು ಪಾಲ್ಗೊಂಡಿದ್ದರು.