ನೀರಿನಲ್ಲಿ ಮುಳುಗಿ ಬಾಲಕ ಸಾವು,ಮೃತ ಬಾಲಕನ ಮನೆಗೆ ಶಾಸಕ ಭೇಟಿ, ನೆರವು -ಸಾಂತ್ವನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ನ.18 :- ಆಟವಾಡುತ್ತಾ ಕಟ್ಟೆಯ ನೀರಿನಲ್ಲಿ ಕಾಲು ಜಾರಿ ಬಿದ್ದು 10 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಸೂಲದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಜರುಗಿದ್ದು ವಿಷಯ ತಿಳಿದ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಮೃತ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹಾಗೂ ಆರ್ಥಿಕ ನೆರವು ನೀಡಿ ಸಂಬಂದಿಸಿದ ಇಲಾಖೆಯಿಂದ ಸರ್ಕಾರದ  ಪರಿಹಾರವನ್ನು ಆದಷ್ಟು ಬೇಗನೆ ತರಿಸುವ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ  ಸೂಲದಹಳ್ಳಿ ಗ್ರಾಮದ ಭಾಗ್ಯಮ್ಮ ಭೀಮಪ್ಪ ಅವರ ಪುತ್ರ ಯುವರಾಜ (10) ಈತನು  ನಾಲ್ಕನೆ ತರಗತಿ ವ್ಯಾಸಂಗ ಮಾಡುತ್ತಿದ್ದು ಶುಕ್ರವಾರದಂದು ಗ್ರಾಮದ ಹೊರವಲಯದ  ಜುಂಜನ ಕಟ್ಟೆ ನೀರಿನಲ್ಲಿ ಕಾಲುಜಾರಿ ಬಿದ್ದು ಮುಳುಗಿ ಸಾವನ್ನಪ್ಪಿದ್ದು ಬಾಲಕನ ಸಾವಿನ  ಸುದ್ದಿ ತಿಳಿದ ತಕ್ಷಣ ಶಾಸಕ  ಡಾ. ಶ್ರೀನಿವಾಸ್ ಎನ್. ಟಿ. ಅವರು ತಕ್ಷಣ
ಕ್ಷೇತ್ರದಲ್ಲಿನ ಕೆಲ  ಕೆಲಸ ಕಾರ್ಯಗಳನ್ನು ಬದಿಗೊತ್ತಿ ಚಿಕ್ಕಜೋಗಿಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಾವನ್ನಪ್ಪಿದ ಬಾಲಕನ  ಸಾವಿನ ಪ್ರಕರಣ ಕುರಿತು ಮಾಹಿತಿಯನ್ನು ಪಡೆದುಕೊಂಡರು  ತಾಲೂಕಿನ  ಚಿಕ್ಕ ಮಕ್ಕಳ  ಪೋಷಣೆಯಲ್ಲಿ ಪಾಲಕ, ಪೋಷಕರು  ನಿಗಾವಹಿಸಬೇಕು ಎಂದು  ತಿಳಿ ಹೇಳಿದರು ಹಾಗೂ ಕಾನಹೊಸಹಳ್ಳಿ ಪೊಲೀಸ್ ಮತ್ತು ವೈದ್ಯಾಧಿಕಾರಿಗಳ  ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಸ್ಥಳದಲ್ಲೇ ಮಾತನಾಡಿ ಸರ್ಕಾರದಿಂದ ಬರುವಂತಹ ಪರಿಹಾರ ವ್ಯವಸ್ಥೆ ತಡ ಮಾಡದೆ ವ್ಯವಸ್ಥೆ ಮಾಡಿಕೊಡುವಂತೆ  ತಿಳಿಸಿದರು ಮತ್ತು ಮೃತ ಬಾಲಕ ಯುವರಾಜನ ಕುಟುಂಬಕ್ಕೆ ತಮ್ಮ ವೈಯಕ್ತಿಕ ಆರ್ಥಿಕ ನೆರವನ್ನು ಶಾಸಕ ಡಾ ಶ್ರೀನಿವಾಸ ನೀಡಿದರು.