ನೀರಿನಲ್ಲಿ ಮುಳುಗಿದೆ ೮ನೇ ವಾರ್ಡ್: ತಿರುಗಿ ನೋಡದ ನಗರಸಭಾ ಸದಸ್ಯ

ಅರಸೀಕೆರೆ, ಅ. ೨೭- ಇಲ್ಲಿನ ಸುಬ್ರಮಣ್ಯ ನಗರ ಹಾಗೂ ಮಲ್ಲೇಶ್ವರ ಸೇರಿದಂತೆ ಮಳೆ ಬಂದರೆ ಸಾಕು ಪ್ರವಾಹ ಪರಿಸ್ಥಿತಿಯಂತೆ ಎತ್ತ ನೋಡಿದರೂ ಕೆರೆಯಂತೆ ನೀರು ನಿಲ್ಲುತ್ತದೆ, ಇದಕ್ಕೆ ಪರಿಹಾರವೇ ಇಲ್ವಾ ಎಂದು ೮ನೇ ವಾರ್ಡ್‌ನ ಜನತೆ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮಳೆಗಾಲ ಬಂದರೆ ಸಾಕು ಸುಬ್ರಮಣ್ಯ ಹಾಗೂ ಮಹದೇಶ್ವರ ಬೆಟ್ಟದಿಂದ ಬಂದ ನೀರು ತಗ್ಗು ಪ್ರದೇಶಕ್ಕೆ ಬಂದು ನಿಲ್ಲುತ್ತದೆ ಹಾಗೂ ಈ ಭಾಗದ ಕೊನೆಯ ಭಾಗಕ್ಕೆ ಹೊಂದಿಕೊಂಡಂತೆ ರೈಲ್ವೆ ಇಲಾಖೆಯವರು ಸುತ್ತ ತಡೆಗೋಡೆ ನಿರ್ಮಿಸಿದ್ದಾರೆ. ಮೇಲಿನಿಂದ ಬಂದು ನೀರು ತಡೆಗೋಡೆಯವರೆಗೂ ನಿಲ್ಲುತ್ತದೆ. ಈ ಭಾಗದ ಸುತ್ತಮುತ್ತಲಿನಲ್ಲಿ ವಾಸ ಮಾಡುವ ಜನತೆಗೆ ನೀರನ್ನು ನೋಡಿ ಮಾಧ್ಯಮದಲ್ಲಿ ಬಿತ್ತರಿಸುವ ಪ್ರವಾಹದ ಸನ್ನಿವೇಶವೇ ಕಣ್ಣೆದುರಿಗೆ ಇದೆ ಎನ್ನುತ್ತಾರೆ. ನಮ್ಮ ಶಾಸಕರು ಕಾಂಕ್ರೀಟ್ ರಸ್ತೆ, ಒಳಚರಂಡಿ ಬಗ್ಗೆ ಎಲ್ಲಾ ಕಡೆ ಭಾಷಣ ಮಾಡುತ್ತಾ ಬರುತ್ತಾರೆ. ಆದರೆ ಈ ವಾರ್ಡ್‌ನ ಸದಸ್ಯರಿಗೆ ಇದರ ಬಗ್ಗೆ ಮಾಹಿತಿ ಇಲ್ಲವೋ ಅಥವಾ ಕಣ್ಮುಚ್ಚಿ ಕುಳಿತ್ತಿದ್ದಾರೋ ಗೊತ್ತಾಗುತ್ತಿಲ್ಲ. ಅಲ್ಲದೆ ಇತ್ತೀಚೆಗಷ್ಟೆ ಬಿಜೆಪಿ ನಾಯಕರು ನಾವು ನಗರವನ್ನು ಸ್ವಚ್ಚ ಭಾರತ ಮಾಡುತ್ತೇವೆ ಎಂದು ಹೊರಟಿದ್ದಾರಲ್ಲ, ಒಮ್ಮೆ ಇತ್ತ ಬಂದು ನಮ್ಮ ವಾರ್ಡ್‌ನ್ನು ಸ್ವಲ್ಪ ನೋಡಿ ಸ್ವಾಮಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಈ ಭಾಗದ ಜನರು ಅವರ ಮನೆಗೆ ಹೋಗಬೇಕಾದರೆ ವಾಹನಗಳಲ್ಲಂತೂ ಹೋಗುವಂತಿಲ್ಲ. ಕೊನೆ ಪಕ್ಷ ನಡೆದುಕೊಂಡು ಅವರವರ ಮನೆಗೆ ಹೋಗಲು ರಸ್ತೆ ಮಾಡುತ್ತಾರಾ ಎಂಬುದು ಅನುಮಾನಕ್ಕೆ ಎಡೆ ಮಾಡಿದೆ.
ಪ್ಲೇಗ್, ಮಾರಿಯಮ್ಮ ದೇವಸ್ಥಾನದ ಸುತ್ತಮುತ್ತ ಗಿಡ ಗೆಂಟೆ ಬೆಳೆದಿದೆ. ಅಲ್ಲದೆ ಈ ಭಾಗದ ಎಲ್ಲ ನೀರು ಒಂದೆಡೆ ಸೇರಿ ಕೊಳಗೇರಿಯಾಗಿದೆ. ಈ ಕೊಳಚೆ ನೀರು ಮಳೆ ನೀರಿನ ಜತೆ ಸೇರುತ್ತದೆ. ಮಲ್ಲೇಶ್ವರ ಮತ್ತು ಸುಬ್ರಮಣ್ಯ ನಗರದ ಮಧ್ಯಭಾಗದಲ್ಲಿ ರೈಲ್ವೆ ಕ್ರೀಡಾಂಗಣದ ಪಕ್ಕ ಕೊಳಚೆ ನೀರು ನಿಂತು ಅಲ್ಲಿ ಸೊಳ್ಳೆ ಕ್ರಿಮಿ ಕೀಟಗಳ ತಾಣವಾಗಿದೆ.
ಈಗಲಾದರೂ ಈ ಭಾಗದ ಜನನಾಯಕ ಎಂದೇ ಹೆಸರುವಾಸಿಯಾಗಿರುವ ೮ನೇ ವಾರ್ಡ್ ನಗರಸಭಾ ಸದಸ್ಯ ಮೇಲಗಿರಿಯಪ್ಪನವರು ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಜಯಶೀಲರಾ ನಂತರ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದು, ಶಾಸಕರ ಜತೆಗೂಡಿ ರಸ್ತೆ, ಚರಂಡಿ ಕಾಮಗಾರಿ ಮಾಡಿ ಆಯ್ಕೆ ಮಾಡಿದ ಜನತೆಗೆ ಅನುಕೂಲ ಮಾಡಿ ಕೊಡುವರೇ ಎಂಬುದನ್ನು ಕಾದು ನೋಡಬೇಕಾಗಿದೆ.