ನೀರಿನಲ್ಲಿ ತ್ರಿವರ್ಣ ಧ್ವಜ ಹಾರಾಟ

ನವದೆಹಲಿ, ಆ ೨- ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಭಾರತೀಯ ಕೋಸ್ಟ್ ಗಾರ್ಡ್ ನೀರಿನಲ್ಲಿ ತ್ರಿವರ್ಣ ಧ್ವಜ ಹಾರಿಸಿರುವುದು ಗಮನ ಸೆಳೆದಿದೆ.
ಇಂಡಿಯನ್ ಕೋಸ್ಟ್ ಗಾರ್ಡ್ ಹರ್ ಘರ್ ತಿರಂಗಾ ಅಭಿಯಾನದ ಪೂರಕವಾಗಿ ನೀರೊಳಗೆ ಧ್ವಜ ಹಾರಿಸುವ ಪೂರ್ವ ಪ್ರದರ್ಶನವನ್ನು ನಡೆಸಿತು. ಭಾರತದ ೭೫ ನೇ ಸ್ವಾತಂತ್ರ್ಯ ದಿನಾಚರಣೆಯ ಗೌರವಾರ್ಥವಾಗಿ ನಡೆಸುತ್ತಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಇದು ಹೊಸ ಮೆರುಗು ನೀಡುತ್ತಿದೆ.
ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರಚೋದಿಸುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಹಿಂದಿನ ಪ್ರಮುಖ ಆಲೋಚನೆಯಾಗಿದೆ ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದರು.
ಭಾರತದ ಸ್ವಾತಂತ್ರ್ಯದ ೭೫ ನೇ ವರ್ಷದ ಸಂಭ್ರಮವನ್ನು ಗುರುತಿಸಲು ಮನೆ ಮನೆಯಲ್ಲಿ ತಿರಂಗ ಹಾರಿಸಲು ಜನರನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಜುಲೈ ೨೨ ರಂದು ಹರ್ ಘರ್ ತಿರಂಗ ಅಭಿಯಾನವನ್ನು ಪ್ರಾರಂಭಿಸಿದರು. ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವುದು ಮತ್ತು ಆಜಾದಿ ಕಾ ಅಮೃತ ಮಹೋತ್ಸವವನ್ನು ಜನರ ನಡುವೆ ಆಚರಿಸುವುದು ಈ ಅಭಿಯಾನದ ಹಿಂದಿನ ಆಲೋಚನೆಯಾಗಿದೆ.