ನೀರಿಗಾಗಿ ತಾಂಡ ಜನರ ಪ್ರತಿಭಟನೆ

ಔರಾದ್ :ಫೆ.27: ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ತಾಲೂಕಿನ ಭೀಮಾ ನಾಯಕ ತಾಂಡದ ಜನರು ಸೋಮವಾರ ತಾಲೂಕು ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮಾಜಿ ಗ್ರಾಪಂ ಅಧ್ಯಕ್ಷ ಪಂಡರಿ ರಾಠೋಡ್, ತಾಂಡದ ಸರ್ವೇ ನಂ. 62 ತೆರೆದ ಬಾವಿ ಕೊರೆಯದೆ ಹಣ ಡ್ರಾ ಮಾಡಲಾಗಿದೆ. ಈ ಕುರಿತು ಈಗಾಗಲೇ ತಾಪಂ ಕಚೇರಿಗೆ ದೂರು ಸಲ್ಲಿಸಿದ್ದೇವೆ. ಆದರೆ ಇಲ್ಲಿಯವರೆಗೆ ಯಾವ ಕ್ರಮವು ಕೈಗೊಂಡಿಲ್ಲ ಎಂದು ದೂರಿದರು.

ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಚಾಲಕ ಬಾಬುರಾವ ಕೌಠಾ ಮಾತನಾಡಿ, ತಾಂಡದ ಸರ್ವೇ ನಂ. 62ರಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 2018-19 ಸಾಲಿನ ಎನ್.ಆರ್ .ಡಿ.ಬ್ಲ್ಯೂ.ಪಿ (ಎಸ್‍ಸಿಪಿ) ಯೋಜನೆಯಡಿ ತೆರೆದ ಬಾವಿ ಕೊರೆಯದೆ ಹಣ ಲೂಟಿ ಮಾಡಿದ್ದಾರೆ ತಾಂಡದ ಜನರಿಗೆ ಕುಡಿಯುವ ನೀರಿಗಾಗಿ ಸರಕಾರ ಅನುದಾನ ನೀಡಿದರೂ ಅಧಿಕಾರಿಗಳ ಭ್ರಷ್ಟಚಾರದಿಂದ ಜನರಿಗೆ ತಲುಪುತ್ತಿಲ್ಲ ಎಂದು ದೂರಿದರು.

ಸರಕಾರ ಕೊರೆದ ಬಾವಿ ಸರ್ವೇ ನಂ. ಬದಲಾವಣೆಯಾಗಿದೆ. 62ರ ಬದಲು ಸರ್ವೇ ನಂ. 4 ರಲ್ಲಿ ಕೊರೆಯಲಾಗಿದೆ. ಈಗ ರೈತ ನೀರು ಕೊಡುತ್ತಿಲ್ಲ. ಅದರ ಬಗ್ಗೆ ಎಲ್ಲವೂ ಗೊತ್ತಿದ್ದರೂ ಅಧಿಕಾರಿಗಳು ತಾಂಡದ ಜನರಿಗೆ ನೀರು ಕೊಡುತ್ತಿಲ್ಲ ಎಂದು ದೂರಿದರು. ಸ್ಥಳದಲ್ಲಿ ತಾಪಂ ಇಒ ಬಿರೇಂದ್ರಸಿಂಗ್ ಠಾಕೂರ್, ಎಇಇ ಸುಭಾಷ ದೇಗಲಗೊಂಡೆ ಭೇಟಿ ನೀಡಿ ತಾಂಡದ ಜನರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ನಾಳೆಯಿಂದ ನೀರು ಸರಬರಾಜು ಮಾಡುತ್ತೇವೆ ಎಂದು ಮನವಲಿಸುವಲ್ಲಿ ಯಶಸ್ವಿಯಾದರು. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಪ್ರಕಾಶ ಭಂಗಾರಿ, ನಬೀ ಸಾಬ್, ದಿನೇಶ ರಾಠೋಡ್, ಬಾಬುರಾವ ರಾಠೋಡ್, ತಾನಾಜಿ ರಾಠೋಡ್, ಸುನಿತಾ, ಸುಲೋಚನಾ, ಆಶಾಬಾಯಿ, ಸಕುಬಾಯಿ, ಮಾರುತಿ ರಾಠೋಡ್, ಮಹಾದೇವ ರಾಠೋಡ್, ಬಾಲಾಜಿ ರಾಠೋಡ್, ಶಿವಾಜಿ, ಗೋವಿಂದ ಸೇರಿದಂತೆ ಅನೇಕರಿದ್ದರು.