ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಏ.24: ಕ್ಷೇತ್ರದಲ್ಲಿನ ಕೆರೆಗಳಿಗೆ ನೀರು ತುಂಬಿಸಿ, ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಹ.ಬೊ.ಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮರಿಯಮ್ಮನಹಳ್ಳಿಯ ಖಾಸಗಿ ಹೊಟೆಲ್ ಬಳಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರನ್ನುದ್ಧೇಶಿಸಿ ಮಾತನಾಡಿದರು.
ನಮ್ಮ ಕ್ಷೇತ್ರದಲ್ಲಿ ಊರಿಗೊಂದು ಕೆರೆಗಳಿದ್ದು, ಅವುಗಳನ್ನ ತುಂಗಭದ್ರ ನದಿಗೆ ಜೋಡಣೆ ಮಾಡಿ, ಜಮೀನು ಹಾಗೂ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ವಲಸೆ ಚಟುವಟಿಕೆ ತಡೆದು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತೇನೆ ಎಂದು ತಮ್ಮ ಯೋಜನೆಗಳನ್ನು ವಿವರಿಸಿದರು.
ಕಳೆದ ಹದಿನೈದು ವರ್ಷಗಳಿಂದ ನೀರಾವರಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಅಲ್ಲದೇ ಕಳೆದ ಎಂಟು ವರ್ಷಗಳ ಹಿಂದೆ ಪಾದಯಾತ್ರೆ ಮಾಡಿ ಧರಣಿ ಮಾಡಿ ಎಸ್‌ಸಿ, ಎಸ್‌ಟಿ ಜಮೀನುಗಳಿಗೆ ನೀರುಣಿಸುವ 50 ಕೋಟಿ ಯೋಜನೆಗೆ ಚಾಲನೆ ಮಾಡಿಸಿದ್ದೆ. ಆದರೆ ಮಾಜಿ ಶಾಸಕನ ಕಮೀಷನ್ ಹಾವಳಿಯಿಂದಾಗಿ ಆ ಯೋಜನೆಗಳು ಅರ್ಧಕ್ಕೆ ನಿಂತಿವೆ. ಅಲ್ಲದೇ ವಯಕ್ತಿಕವಾಗಿ ಈ ರೀತಿಯ ಅನೇಕ ಸಣ್ಣಪುಟ್ಟ ಯೋಜನೆಗಳನ್ನು ಕ್ಷೇತ್ರದ ಜನಗಳಿಗೆ ಮಾಡಿಕೊಟ್ಟಿದ್ದೇನೆ. ಈ ಹೋರಾಟಗಳಿಂದಾಗಿ ಜನಮನಗಳಲ್ಲಿ ಚಿರಪರಿಚಿತನಾಗಿದ್ದೇನೆ. ಅಲ್ಲದೇ ಕ್ಷೇತ್ರದ ಜನರಿಂದ ಉತ್ತಮ ಸ್ಪಂದನೆ ಇದೆ ಎಂದರು.
ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಪಕ್ಷ ತೊರೆದಿಲ್ಲ. ಪ್ರಾಮಾಣಿಕ ಕಾರ್ಯಕರ್ತರು ಹಾಗೂ ನಮ್ಮ ವರಿಷ್ಟರ ಸಾಂಘಿಕ ಪ್ರಯತ್ನದಲ್ಲಿ ನನ್ನ ಗೆಲುವು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.
ಬಿಜೆಪಿಯ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ದಿನಕಳೆದಂತೆ ಬಿಜೆಪಿಯ ಪಕ್ಷದ ಸಿದ್ದಾಂತಗಳು ಜನರಿಗೆ ಅರಿವಾಗುತ್ತಿದ್ದು, ಈ ಬಾರಿ ನಮ್ಮ ಪಕ್ಷ ಜಯಶಾಲಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಟಿಕೆಟ್ ಘೋಷಣೆಯ ನಂತರ ಲಿಂಗಾಯತ ಸಮುದಾಯ ಅಭ್ಯರ್ಥಿಯ ಪರ ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಪ್ರತಿಪಕ್ಷದವರು ಈ ರೀತಿಯ ಅಂಶವನ್ನಿಟ್ಟುಕೊಂಡು ಪಕ್ಷದ ಕುರಿತಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ಯಾವುದೇ ಗೊಂದಲ ಹಾಗೂ ಸಂಶಯಬೇಡ. ನಮ್ಮ ಪಕ್ಷದಲ್ಲಿ ಎಲ್ಲರೂ ಸಮಾನರು ಎನ್ನುವ ಭಾವನೆ ಇದ್ದು, ನಾವೆಲ್ಲರೂ ಯಾವುದೇ ಮತ ಭೇದವಿಲ್ಲದೇ ಒಗ್ಗಟ್ಟಾಗಿ ಗೆಲ್ಲಲು ಶ್ರಮಿಸುತ್ತೇವೆ. ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಬಲವಾಗಿದ್ದು, ವರಿಷ್ಠರ ನಿರ್ಣಯದಂತೆ ಕಾರ್ಯಕರ್ತರ ಸಹಕಾರದೊಂದಿಗೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷ ತೊರೆದ ಕಾರ್ಯಕರ್ತರ ಕುರಿತಾಗಿ ಮಾತನಾಡಿ, ಈಗಾಗಲೇ ಪಕ್ಷ ತೊರೆದ ಕಾರ್ಯಕರ್ತರೊಂದಿಗೆ ನಾವುಗಳು ಸಂಪರ್ಕದಲ್ಲಿದ್ದು, ಅವರಿಗೂ ಗಡಿಬಿಡಿಯಲ್ಲಿ ಪಕ್ಷ ತೊರೆದ ವಿಚಾರ ಅರಿವಾಗಿದೆ. ಅವರಿಗೆ ಸಮಯಾವಕಾಶ ನೀಡಿ ಎರಡು ದಿನಗಳ ನಂತರ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ದೇವೇಂದ್ರಪ್ಪ, ಪ್ರವೀಣ್ ಗೂಗೆ, ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ, ಮಲ್ಲಿಕಾರ್ಜುನ ನಾಯ್ಕ್, ಕೃಷ್ಣನಾಯ್ಕ್, ರಾಜೇಂದ್ರ ನಾಯ್ಕ್, ಬದ್ರನಾಡಿ ಚಂದ್ರಶೇಖರ್, ಕೆ.ಎಂ.ತಿಪ್ಪೇಸ್ವಾಮಿ, ಡಿ.ರಾಘವೇಂದ್ರ ಶೆಟ್ಟಿ, ಗಂಡಿ ಬಸವರಾಜ್, ನರೇಗಲ್ ಕೊಟ್ರೇಶ್, ಜೋಗಿ ಹನುಮಂತ, ವೆಂಕಟೇಶ್, ರವಿಕಿರಣ್, ಅಂಬರೀಶ್, ರವಿ ಯಾದವ್, ಕಲಾಲ್ ರಾಘವೇಂದ್ರ, ಹಾಗೂ ಇನ್ನಿತರೆ ಕಾರ್ಯಕರ್ತರು ಉಪಸ್ಥಿತರಿದ್ದರು.