ನೀರಾವರಿ ಯೋಜನೆ ಯಶಸ್ವಿಯ ಜೊತೆಗೆ ನಿರ್ವಹಣೆ ಬೇಕಲ್ಲವೆ?


ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.27 ಮಾಲವಿ (ಹಗರಿ ) ಜಲಾಶಯಕ್ಕೆ  ಶಾಶ್ವತ ನೀರಿಗಾಗಿ ಏತ ನೀರಾವರಿ ಯೋಜನೆಯ ಮೂಲಕ ಮೊನ್ನೆ  ಪರೀಕ್ಷಾರ್ಥಕವಾಗಿ  ನೀರು ಹರಿಯುವುದು ಕಂಡು ಶಾಸಕರು,ರೈತರು ಹಾಗೂ ವಿವಿಧ ಸಂಘಟನೆಯ ಮುಖಂಡರ  ಸಂಭ್ರಮಿಸಿದರು.
 ಈ ಯೋಜನೆಯ ಸಫಲದ  ಹಿಂದೆ ರೈತ ಹೋರಾಟಗಾರರು ಕನ್ನಡ ಪರ ಸಂಘಟನೆ, ವರ್ತಕರು, ಮಠಾಧೀಶರು, ಶಾಸಕ ಎಸ್. ಭೀಮನಾಯ್ಕ್ , ಜನಪ್ರತಿನಿಧಿಗಳು  ಹಾಗೂ ಅಂದಿನ ಸರ್ಕಾರ ಈಗಿನ ಸರ್ಕಾರದ ಮುಖ್ಯಮಂತ್ರಿಗಳಿಗೆ ಕೀರ್ತಿ  ಸಲ್ಲುತ್ತದೆ.
 ಬಹು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಶಾಶ್ವತ ನೀರಾವರಿ ಯೋಜನೆ ಈಗ ಕಾರ್ಯರೂಪಕ್ಕೆ ಬಂದು ಯಶಸ್ವಿಯಾಗಿದ್ದು ಕಂಡ ಜನರು ಮಾತನಾಡಿಕೊಳ್ಳುತ್ತಿದ್ದು  ಈ ಯೋಜನೆ ಶಾಶ್ವತವಾಗಿರಬೇಕೆಂದರೆ   ಅದರ ನಿರ್ವಹಣೆ ಮುಖ್ಯ ಅಲ್ಲವೇ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿ ಸರ್ಕಾರದ ಬಜೆಟ್ಟಿನಲ್ಲಿ 150 ಕೋಟಿ ರೂ. ಅನುದಾನ ತೆಗೆದಿರಿಸಲಾಗಿತ್ತು. ನಂತರ ಬಿಜೆಪಿ ಸರ್ಕಾರದ ಸಿಎಂ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ  ಯೋಜನೆಗೆ ಅಂತಂತವಾಗಿ ಹಣವನ್ನು ಬಿಡುಗಡೆ ಮಾಡುವ ಮೂಲಕ ಯೋಜನೆಯನ್ನು ಸಾರ್ಥಕ ಗೊಳಿಸಿದರು.
 ಯೋಜನೆಯ ಯಶಸ್ವಿಯ ಜೊತೆಗೆ ಲಾಭ ನಷ್ಟ ನೋಡಬೇಕಾಗುತ್ತದೆ. ಈ ಯೋಜನೆಯ ಉದ್ದೇಶ ಮತ್ತು ಅದರ ಸಾಧಕ ಬಾಧಕ ಕೂಡ ಮುಖ್ಯ? ಇದು ಕೆಲವೇ ವರ್ಷಗಳಿಗೆ ಸೀಮಿತವಾಗಬಾರದು ಮುಂದಿನ ಪೀಳಿಗೆಗೂ ಉಳಿಯುವಂತೆ ಕಾಪಾಡಿಕೊಂಡು ಹೋಗುವಂತಹ ಕೆಲಸವಾಗಬೇಕು. ಅದಕ್ಕೋಸ್ಕರ ಇದರ ಕರೆಂಟ್ ಬಿಲ್  ಹಾಗೂ  ನಿರ್ವಹಣೆಗೆ  ಮೂಲ ಸಂಪನ್ಮೂಲ ಕ್ರೋಡೀಕರಣಬೇಕು. ಅದನ್ನು ಹೇಗೆ ಹೊಂದಿಸಬೇಕು ಮತ್ತು ನಿಭಾಯಿಸಬೇಕು ಎಂಬುವುದು ಮುಖ್ಯ ಪ್ರತಿ ವರ್ಷವೂ  ಸರ್ಕಾರದ ದುಡ್ಡು  ಖರ್ಚು ಮಾಡಲು ಸಾಧ್ಯವಿಲ್ಲ. ಸರ್ಕಾರಗಳು ಬದಲಾಗುತ್ತಿವೆ, ಅಧಿಕಾರಿಗಳು ಬದಲಾಗುತ್ತಾರೆ ಆದರೆ ಯೋಜನೆ ಬದಲಾಗುವುದಿಲ್ಲ. ಸರ್ಕಾರದ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ  ಅಧಿಕಾರಿಗಳು ಇಂಥ ಯೋಜನೆಗಳು ನಿರಂತರವಾಗಿ ನಡೆಯಬೇಕೆಂದರೆ ಅವರ ನಿಷ್ಠೆ ಮತ್ತು ಕರ್ತವ್ಯ ಪ್ರಾಮಾಣಿಕವಾಗಿರಬೇಕು. ಸುಖ ಸುಮ್ಮನೆ ಜನರ  ತೆರಿಗೆ  ಹಣ ಪೋಲಾಗಬಾರದು ನಿರ್ವಹಣೆ ಹೆಸರಲ್ಲಿ  ಪರ್ಸೆಂಟೇಜ್, ಕಮಿಷನ್ ಅಂತ ತಿಂದು ತೇಗುತ್ತಾ ಹೋದರೆ ಈಗಾಗಲೇ  ಇಂತಹ ಸರ್ಕಾರದ ಏತ ನೀರಾವರಿ ಯೋಜನೆಗಳು ನಿರ್ವಹಣೆ ಇಲ್ಲದೆ ವಿಫಲಗೊಂಡಿವೆ. ಇದು ಕೂಡ 10 ರಲ್ಲಿ 11 ಆಗಬಾರದು ಎಂಬುದೇ ಪ್ರಜ್ಞಾವಂತರ ಆಶಯವಾಗಿದೆ.